ಮಂಗಳೂರು : ಹೊಂಚು ಹಾಕಿ ಸಂಚು ರೂಪಿಸಿ ಸಾಕು ನಾಯಿಯ ಮೇಲೆ ಚಿರತೆಯೊಂದು ದಾಳಿ ನಡೆಸಿದ ಘಟನೆ ನಗರದ ಎಕ್ಕಾರು ಮುಗೇರಬೆಟ್ಟು ಬೇಡೆ ಎಂಬಲ್ಲಿ ನಡೆದಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೈರಲ್ ಆಗುತ್ತಿದೆ.
ಎಕ್ಕಾರಿನ ಬೇಡೆ ನಿವಾಸಿ ಸುಮತಿ ಎಂಬುವರ ಮಕ್ಕಳು ತಮ್ಮ ನಾಯಿಗಳೊಂದಿಗೆ ಮನೆಯ ಹತ್ತಿರದಲ್ಲಿಯೇ ಇದ್ದ ಕುರುಚಲು ಪೊದೆಯ ಗುಡ್ಡ ಪ್ರದೇಶಕ್ಕೆ ತೆರಳಿದ್ದರು. ಈ ಸಂದರ್ಭ ಬೇಟೆಗೆ ಹೊಂಚು ಹಾಕಿ ಕುಳಿತಿದ್ದ ಚಿರತೆ ಓಡಿ ಬಂದು ಮಕ್ಕಳ ಪಕ್ಕದಲ್ಲಿಯೇ ಇದ್ದ ನಾಯಿಗಳ ಮೇಲೆ ಎರಗಿದೆ. ಒಂದು ನಾಯಿಯನ್ನು ಬೇಟೆಯಾಡಿ ಬಾಯಿಯಲ್ಲಿ ಕಚ್ಚಿಕೊಂಡು ಓಡಲು ಯತ್ನಿಸಿದೆ.
ಆದ್ರೆ, ಅದಾಗಲೇ ಜಾಗೃತರಾದ ಮಕ್ಕಳು ತಕ್ಷಣ ಜೋರಾಗಿ ಬೊಬ್ಬೆ ಹಾಕಿದ್ದಾರೆ. ಪರಿಣಾಮ ಬೆದರಿ ಓಡುತ್ತಿದ್ದ ಚಿರತೆಯ ಬಾಯಿಯಿಂದ ನಾಯಿ ಕೆಳಗೆ ಬಿದ್ದಿದೆ. ಈ ಎಲ್ಲಾ ದೃಶ್ಯ ಮನೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮನೆಯ ಪರಿಸರದಲ್ಲಿಯೇ ಚಿರತೆ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಅರಣ್ಯ ಅಧಿಕಾರಿಗಳಿಗೆ, ಸ್ಥಳೀಯ ಜನಪ್ರತಿನಿಧಿಗಳಿಗೆ ತಿಳಿಸಿದರೂ ಏನೂ ಪ್ರಯೋಜನವಾಗಿಲ್ಲ. ಜನತೆ ಇದರಿಂದ ಹೆದರಿ ಬದುಕು ಸಾಗಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡರು.