ಮಂಗಳೂರು: ನಗರದ ಕಮಿಷನರೇಟ್ನ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮಟ್ಕಾ ದಂಧೆ ನಡೆಸುತ್ತಿದ್ದ ಸ್ಥಳಗಳ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ಐವರನ್ನು ಬಂಧಿಸಿ, ನಗದು ಸಹಿತ ಮಟ್ಕಾ ಚೀಟಿ, ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಅತ್ತಾವರ, ಎನ್.ಜಿ ರಸ್ತೆ, ವೈದ್ಯನಾಥ ಕಂಪೌಂಡ್ ನಿವಾಸಿ ನಂದನ್ ಎಸ್.ನಾಯ್ಕ್ (35), ಮಣ್ಣಗುಡ್ಡೆ, ಬರ್ಕೆ, ರಾಮ ಮೇಸ್ತ್ರಿ ಕಂಪೌಂಡ್ ನಿವಾಸಿ ಪ್ರಶಾಂತ್(47), ಉರ್ವ, ಹೊಯಿಗೆಬೈಲ್, ದುರ್ಗಾ ನಿವಾಸಿ ಅನಿಲ್ ಕುಮಾರ್(44), ಕೊಡಿಯಾಲ್ ಬೈಲ್, ವಿಶಾಲ್ ನರ್ಸಿಂಗ್ ಹೋಮ್ ಬಳಿಯ ಅಭಿರಾಮ್ ಅಪಾರ್ಟ್‌ಮೆಂಟ್ ನಿವಾಸಿ ದಿನಕರ ಆಳ್ವಾ (44), ಕಾವೂರು ಅಂಚೆ ಕಚೇರಿ ಬಳಿ ನಿವಾಸಿ ಅನಿಲ್ ಕುಮಾರ್(42) ಎಂಬುವವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಣೆದಾರರ ಬಂಧನ: 238 ಗ್ರಾಂ ಬಂಗಾರ ವಶ
ಮಟ್ಕ ದಂಧೆಯಲ್ಲಿ ನಿರತರಾಗಿದ್ದ ಆರೋಪಿಗಳಿಂದ 30,130 ರೂ. ನಗದು, 5 ಮೊಬೈಲ್ ಫೋನ್ಗಳು, ಮಟ್ಕಾ ಬರೆಯುವ ಚೀಟಿಗಳು ಸೇರಿ ಒಟ್ಟು 66,130 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮಂಗಳೂರು ದಕ್ಷಿಣ, ಬರ್ಕೆ, ಮಂಗಳೂರು ಉತ್ತರ, ಕಾವೂರು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.