ಮಂಗಳೂರು: ದಕ್ಷಿಣ ಕನ್ನಡಕ್ಕೆ ಜಿಲ್ಲೆಗೆ ಈವರೆಗೆ ಬಂದ ಜಿಲ್ಲಾಧಿಕಾರಿಗಳಲ್ಲೇ ಸಸಿಕಾಂತ್ ಸೆಂಥಿಲ್ ಉತ್ತಮ ಐಎಎಸ್ ಅಧಿಕಾರಿ. ಸೆಂಥಿಲ್ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ತಿಳಿದು ಬಹಳ ನೋವಾಗಿದೆ ಎಂದು ಜಿಲ್ಲಾಧಿಕಾರಿಗಳ ಕಾರು ಚಾಲಕ ಬಾಬು ನಾಯ್ಕ್ ಮಾಧ್ಯಮಗಳ ಮುಂದೆ ಮಾತನಾಡುತ್ತ ಭಾವುಕರಾದರು.
ನಗರದ ನೀರುಮಾರ್ಗ ನಿವಾಸಿ ಬಾಬು ನಾಯ್ಕ್, ಜಿಲ್ಲಾಧಿಕಾರಿಯವರ ವಾಹನ ಚಾಲಕರಾಗಿ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಾರದಲ್ಲಿ ಕನಿಷ್ಠ ಪಕ್ಷ ನಾಲ್ಕೈದು ದಿನ ಜೊತೆಯಾಗಿದ್ದು, ಡಿಸಿ ಸೆಂಥಿಲ್ ಅವರನ್ನು ಹತ್ತಿರದಿಂದ ಬಲ್ಲವರು. ಇಂದು ದಿಢೀರ್ ಆಗಿ ಸಸಿಕಾಂತ್ ಸೆಂಥಿಲ್ ಅವರು ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ತಿಳಿದು, ಸಸಿಕಾಂತ್ ಸೆಂಥಿಲ್ ನಿವಾಸಕ್ಕೆ ಧಾವಿಸಿದ ಬಾಬು ನಾಯ್ಕ್, ಅವರು ಇಲ್ಲದಿರುವುದನ್ನು ಕಂಡು ದುಃಖಿತರಾಗಿಯೇ ಅಲ್ಲಿಂದ ನಿರ್ಗಮಿಸಿದರು.
ಈ ಸಂದರ್ಭ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಬಗ್ಗೆ ಮಾತನಾಡುತ್ತಾ, ನನ್ನದು 34 ವರ್ಷಗಳ ಸೇವೆ. ಈ ಅವಧಿಯಲ್ಲಿ 25 ಜಿಲ್ಲಾಧಿಕಾರಿಗಳನ್ನು ನೋಡಿದ್ದೇನೆ. ನಾನು ನವೆಂಬರ್ ತಿಂಗಳಲ್ಲಿ ನಿವೃತ್ತಿ ಹೊಂದಲಿದ್ದೇನೆ. ನನ್ನ ಸೇವೆಯನ್ನು ಪರಿಗಣಿಸಿ ನನಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಸೆಂಥಿಲ್ ನೀಡಿದ್ದರು. ಆದರೆ, ಎಲ್ಲರೊಂದಿಗೆ ಸ್ನೇಹದಿಂದ ಬೆರೆಯುವ ಗುಣವುಳ್ಳ ಜಿಲ್ಲಾಧಿಕಾರಿ ರಾಜೀನಾಮೆ ನೀಡುತ್ತಾರೆನ್ನುವಾಗ ತುಂಬ ಬೇಸರವಾಗುತ್ತಿದೆ ಎಂದು ನಾಯ್ಕ್ ಕಣ್ಣೀರಿಟ್ಟರು.