ಮಂಗಳೂರು: ಮೀನುಗಾರಿಕಾ ಕ್ಷೇತ್ರದಲ್ಲಿ ನೂತನ ತಾಂತ್ರಿಕ ಆವಿಷ್ಕಾರಗಳು ನಡೆಯುತ್ತಿದ್ದು, ಇದೀಗ ಮೀನುಗಾರರ ಚಿತ್ತ ಪಂಜರ ಮೀನು ಕೃಷಿಯತ್ತ ತೆರಳಿದೆ. ತಣ್ಣೀರುಬಾವಿಯಲ್ಲಿನ ಫಲ್ಗುಣಿ ನದಿ ಕಿನಾರೆ ಪರಿಸರದಲ್ಲಿ ನಾಲ್ವರು ಮೀನು ಕೃಷಿಕರು, ನೀರಿನ ಮಧ್ಯೆಯೇ ಪಂಜರ ಬಲೆಯೊಳಗೆ ಮೀನುಗಳನ್ನು ಸಾಕಿ ಲಾಭದಾಯಕ ಉದ್ಯಮವನ್ನಾಗಿಸುವ ಕನಸು ಹೊತ್ತಿದ್ದಾರೆ.
ನವೆಂಬರ್ ತಿಂಗಳಿನಲ್ಲಿ ಡಾರ್ವಿನ್ ಕುವೆಲ್ಲೋ, ಸಿಪ್ರಿಯನ್ ಡಿಸೋಜ, ಜಗದೀಶ್, ಪ್ರಶಾಂತ್ ಎಂಬ ನಾಲ್ವರು ಮೀನು ಕೃಷಿಕರು ಜೊತೆಯಾಗಿ, ಪಂಜರ ಮೀನು ಕೃಷಿ ಆರಂಭಿಸಿದ್ದಾರೆ. ಇವರೆಲ್ಲರೂ ತಲಾ 1,500 ಸೀಬಾಸ್ (ಮುಡಾವು ಅಥವಾ ಕುರ್ಡಿ ಮೀನು) ಮೀನು ಮರಿಗಳನ್ನು ತಂದು ಸಾಕಿದ್ದಾರೆ. ಇದೀಗ ಮೀನು ಮರಿ ಸಾಕಷ್ಟು ದೊಡ್ಡದಾಗಿದ್ದು, ಇವರ ಪ್ರಕಾರ ಒಂದುವರೆ ವರ್ಷದಲ್ಲಿ ಈ ಮೀನುಗಳು ಮಾರಾಟಕ್ಕೆ ಯೋಗ್ಯವಾಗಲಿದೆ. ಒಂದು ಕೆ.ಜಿ ಸೀಬಾಸ್ ಮೀನಿಗೆ ಈಗ ಮಾರುಕಟ್ಟೆಯಲ್ಲಿ 600 ರೂ. ಬೆಲೆಯಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಬೇಡಿಕೆ ಇದೆ.
ದ.ಕ. ಜಿಲ್ಲಾ ಪಂಚಾಯತ್ನಲ್ಲಿ ಮೀನುಗಾರಿಕೆ ಇಲಾಖೆಯಿಂದ ತರಬೇತಿ ಪಡೆದ ಈ ನಾಲ್ವರೂ, ತಮ್ಮ ಮನೆಯ ಮಹಿಳೆಯರ ಹೆಸರಿನಲ್ಲಿ ನೋಂದಣಿ ಮಾಡಿಕೊಂಡು ಪಂಜರ ಮೀನು ಕೃಷಿ ಆರಂಭಿಸಿದ್ದಾರೆ. ಕುಂದಾಪುರದ ಗಣೇಶ್ ಖಾರ್ವಿಯವರ ಮೂಲಕ ಮೀನು ಮರಿಗಳನ್ನು ಆಂಧ್ರಪ್ರದೇಶದಿಂದ ತಂದು ಸಾಕಿದ್ದಾರೆ.
ಏನಿದು ಪಂಜರ ಕೃಷಿ?
ಸಿಹಿ ನೀರು, ಹಿನ್ನೀರು ಇರುವ ಹೊಳೆಯ ಬದಿಯಲ್ಲಿ, ಟ್ಯಾಂಕರ್ ನೆರವಿನಿಂದ ಬಾಕ್ಸ್ ಮಾದರಿಯಲ್ಲಿ ಮೀನು ಮರಿಗಳನ್ನು ಸಾಕಲಾಗುತ್ತದೆ. 3-4 ತಿಂಗಳುವರೆಗೆ 6×4 ಅಗಲದ ಪಂಜರದಲ್ಲಿ ಮೀನು ಮರಿಗಳನ್ನು ಸಾಕಿದರೆ, ಮೀನುಗಳು ದೊಡ್ಡದಾಗುವಂತೆ 10×12 ಪಂಜರ ಬಲೆಗೆ ಮೀನುಗಳನ್ನು ವರ್ಗಾಯಿಸಲಾಗುತ್ತದೆ.
ಹಕ್ಕಿಗಳು, ಇನ್ನಿತರ ಜಲಚರಗಳು ಪಂಜರದೊಳಗೆ ಬಂದು ಮೀನುಗಳನ್ನು ತಿನ್ನದಂತೆ, ಅಥವಾ ಪಂಜರದೊಳಗಿನ ಮೀನುಗಳು ಹೊರಹೋಗದಂತೆ ಬಲೆಗಳನ್ನು ಬಿಗಿದಿರಲಾಗುತ್ತದೆ. ಆದರೆ ಪಂಜರದೊಳಗೆ ನೀರಿನ ಹರಿವು ನಿರಂತರವಾಗಿ ಇರುವಂತೆ, ಯಥೇಚ್ಛವಾಗಿ ಆಮ್ಲಜನಕ ದೊರಕುವಂತೆ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲದೆ ಮೀನಿಗೆ ಆಹಾರ ಒದಗಿಸಲು ಬೇಕಾದ ವ್ಯವಸ್ಥೆ ಮಾಡಲಾಗಿದೆ. ಈ ಮೀನುಗಳಿಗೆ ದಿನಕ್ಕೆರಡು ಬಾರಿಯಂತೆ ಮೀನು ತ್ಯಾಜ್ಯವನ್ನು ಆಹಾರವಾಗಿ ಒದಗಿಸಲಾಗುತ್ತದೆ. ಈ ರೀತಿಯಲ್ಲಿ ಸಾಕಿದ ಮೀನು ಒಂದುವರೆ ವರ್ಷದೊಳಗೆ ದೊಡ್ಡದಾಗಿ ಮಾರಾಟಕ್ಕೆ ಲಭ್ಯವಾಗುತ್ತದೆ.
ಮೀನು ಪಂಜರಗಳ ರಕ್ಷಣೆಗೆ ಸಿಸಿ ಕ್ಯಾಮರಾ:
ಯಾರೂ ದುಷ್ಕೃತ್ಯ ಎಸಗದಂತೆ, ಮೀನುಗಳನ್ನು ಕದ್ದೊಯ್ಯದಂತೆ ನೋಡಿಕೊಳ್ಳಲು ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ರಾತ್ರಿ ಹೊತ್ತು ವಿಶೇಷವಾಗಿ ಆ ಪ್ರದೇಶದಲ್ಲಿ ಬೆಳಕಿನ ವ್ಯವಸ್ಥೆ ಕಲ್ಪಿಸಲು ಸೋಲಾರ್ ಅಳವಡಿಕೆ ಮಾಡಲಾಗಿದೆ. ಅಲ್ಲದೆ ದಿನವೂ ಮೀನಿಗೆ ಆಹಾರ ಒದಗಿಸಲು ನಾಲ್ವರೂ ನಾಲ್ಕು ದೋಣಿಗಳನ್ನು ಇಟ್ಟುಕೊಂಡಿದ್ದಾರೆ.
ಸಬ್ಸಿಡಿ ದೊರಕಿದಲ್ಲಿ ಮೀನು ಕೃಷಿ ಇನ್ನಷ್ಟು ಬೆಳೆಸುವ ಕನಸು:
ಪಂಜರ ಮೀನು ಕೃಷಿಗಾಗಿ ಸರ್ಕಾರ ಮಹಿಳೆಯರಿಗೆ 1 ಲಕ್ಷ ರೂ.ಗೆ 60 ಸಾವಿರ ರೂ. ಸಬ್ಸಿಡಿ ನೀಡುತ್ತದೆ. ಆದ್ದರಿಂದ ಈ ನಾಲ್ವರೂ ತಮ್ಮ ಮನೆಯ ಮಹಿಳೆಯರ ಹೆಸರಿನಲ್ಲಿ ಮೀನು ಕೃಷಿ ಆರಂಭಿಸಿದ್ದಾರೆ. ಈಗಾಗಲೇ ಸರ್ಕಾರದ ಸಬ್ಸಿಡಿಗೆ ಅರ್ಜಿಗಳನ್ನು ಹಾಕಿದ್ದಾರೆ. ಆದಷ್ಟು ಶೀಘ್ರದಲ್ಲಿ ಸಬ್ಸಿಡಿ ಹಣ ತಮ್ಮ ಕೈಗೆ ತಲುಪಿದ್ದಲ್ಲಿ, ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಪಂಜರ ಮೀನು ಕೃಷಿ ಬೆಳೆಸಲು ಸಾಧ್ಯ ಎಂಬುದು ಈ ಮೀನು ಕೃಷಿಕರ ಅಭಿಪ್ರಾಯ.
ಕೈಗಾರಿಕೆಗಳ ತ್ಯಾಜ್ಯದ ಭೀತಿ:
ಅಲ್ಲದೆ ಇದೀಗ ಪಂಜರ ಮೀನು ಕೃಷಿ ಆರಂಭಿಸಿರುವ ಫಲ್ಗುಣಿ ನದಿ ತೀರದ ತಟದಲ್ಲಿ ಬಹಳಷ್ಟು ಕೈಗಾರಿಕೆಗಳು ತಲೆಯೆತ್ತಿದ್ದು, ತ್ಯಾಜ್ಯವನ್ನು ಶುಚಿಗೊಳಿಸದೆ ನೇರವಾಗಿ ನೀರಿಗೆ ಬಿಡುತ್ತಿದೆ. ಇದರಿಂದ ಫಲ್ಗುಣಿ ನದಿ ನೀರು ಕಲುಷಿತಗೊಳ್ಳುತ್ತಿದ್ದು, ಇದು ಜಲಚರಗಳಿಗೆ ಮಾರಕವಾಗುತ್ತಿದೆ. ಇದರಿಂದ ನಮ್ಮ ಪಂಜರ ಮೀನು ಕೃಷಿಗೂ ಸಂಕಷ್ಟವಾಗಿದೆ. ಹಾಗಾಗಿ ಎಲ್ಲಾ ಕೈಗಾರಿಕೆಗಳು ಜಲಚರಗಳ ಉಳಿವಿಗಾಗಿ ಕೈಗಾರಿಕಾ ತ್ಯಾಜ್ಯವನ್ನು ಶುದ್ಧೀಕರಣ ಮಾಡಿ ನೀರಿಗೆ ಬಿಟ್ಟಲ್ಲಿ ಉತ್ತಮ ಎಂದು ಮೀನು ಕೃಷಿಕರು ಹೇಳುತ್ತಿದ್ದಾರೆ.
ಜೊತೆಗೆ ಪಾಚಿಲೆ ಎಂಬ ಮೃದ್ವಂಗಿಗಳ ಕೃಷಿಯನ್ನು ಮಾಡುತ್ತಿದ್ದಾರೆ. ಇದರಿಂದಲೂ ಲಾಭ ಗಳಿಸಲು ಸಾಧ್ಯ. ಮಾರುಕಟ್ಟೆಯಲ್ಲಿ ಪಾಚಿಲೆಗಳಿಗೆ ಒಳ್ಳೆಯ ಬೇಡಿಕೆ ಇದೆ ಎಂದು ಪಂಜರ ಮೀನು ಕೃಷಿಕರು ಹೇಳುತ್ತಾರೆ.