ಮಂಗಳೂರು (ದಕ್ಷಿಣ ಕನ್ನಡ) : ಕೇಂದ್ರ ಸರ್ಕಾರ ಸರ್ವರ್ ಹ್ಯಾಕ್ ಮಾಡಿದೆ ಎಂಬ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿರುಗೇಟು ನೀಡಿದ್ದು, ಮುಂದೆ ಕಾಂಗ್ರೆಸ್‌ನವರು ನಮ್ಮ ಮೈಂಡ್ ಹ್ಯಾಕ್ ಮಾಡಲಾಗಿದೆ. ಆದ್ದರಿಂದ ನಾವು ಹುಚ್ಚುಚ್ಚು ಹೇಳಿಕೆ ಕೊಡುತ್ತಿದ್ದೇವೆ ಎಂಬ ರೀತಿಯಲ್ಲಿ ಮಾತನಾಡಬಹುದು ಎಂದು ವ್ಯಂಗ್ಯವಾಡಿದರು.
ಮಂಗಳೂರಿನಲ್ಲಿ ಇಂದು ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೂರಾರು ಯೋಜನೆಗಳನ್ನು ಕೊಟ್ಟಿದ್ದಾರೆ. ಚುನಾವಣೆಗೆಂದು ಯಾವ ಯೋಜನೆಯನ್ನೂ ಅವರು ಘೋಷಣೆ ಮಾಡಿಲ್ಲ. ಚುನಾವಣೆ ಗೆದ್ದ ಬಳಿಕ ಜನರ ಅವಶ್ಯಕತೆಗಳನ್ನು ಗುರುತಿಸಿ ಯೋಜನೆಗಳನ್ನು ಅವರು ಕೊಟ್ಟಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವದಲ್ಲೇ ಡಂಗುರ ಹೊಡೆದಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದಾಗಲೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇತ್ತು. ಆಗ ಸಿದ್ದರಾಮಯ್ಯ ಮೋದಿ ಅಕ್ಕಿ ಕೊಟ್ಟರು ಅಂತ ಹೇಳಿದ್ರಾ?. ಆಗಲೂ ನಾನು ಕೊಟ್ಟೆ ಎಂದೇ ಹೇಳಿದ್ದರು. ಯಾವುದೇ ರಾಜ್ಯಗಳಿಗೆ ಕೇಂದ್ರ ಸರ್ಕಾರ ಅಕ್ಕಿ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಗರೀಬಿ ಕಲ್ಯಾಣ್ ಯೋಜನೆಗೆ ಬಳಸಿ ಉಳಿದರೆ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತೇವೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ ಎಂದು ಸಿ.ಟಿ. ರವಿ ಸ್ಪಷ್ಟನೆ ನೀಡಿದರು.
ಮೊದಲು ಆಮ್ ಅದ್ಮಿ ಪಾರ್ಟಿ (ಆಪ್) ಇಂತಹ ಫ್ರೀ ಸ್ಕೀಂ ಆರಂಭಿಸಿತು. ಬಳಿಕ ಅದನ್ನು ಕಾಂಗ್ರೆಸ್ ಜೋಡಿಸಿಕೊಂಡಿತು. ನಮ್ಮ ಸರ್ಕಾರ ಆತ್ಮನಿರ್ಭರ ಯೋಜನೆಯ ಮೂಲಕ ಸ್ವಾವಲಂಬಿ ಬದುಕಿಗೆ ನೆರವು ನೀಡುತ್ತಿದೆ. ನಮ್ಮ ಮತ ಕಡಿಮೆಯಾಗಿ ನಾವು ಅಧಿಕಾರ ಕಳೆದುಕೊಂಡಿಲ್ಲ. 2013ರಲ್ಲಿ ಕಾಂಗ್ರೆಸ್ ಗೆದ್ದಿತ್ತು. ಆದರೆ ಇದೇ ಜನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿದರು. ಆಗಲೂ ಸಿದ್ದರಾಮಯ್ಯ, ಹೆಚ್.ಡಿ. ಕುಮಾರಸ್ವಾಮಿ ನಾವು ಗೆಲ್ಲಲ್ಲ ಅಂದಿದ್ದರು. ಆದರೆ ಜನ ಲೋಕಸಭೆಗೆ ಬಿಜೆಪಿಗೆ ಓಟ್ ಹಾಕಿ ಗೆಲ್ಲಿಸಿದರು. ದೇಶ ಗೆಲ್ಲಬೇಕು ಅನ್ನೋರು ಮೋದಿಯವರನ್ನು ಗೆಲ್ಲಿಸುತ್ತಾರೆ, ದೇಶ ಹಾಳಾಗಬೇಕು ಎನ್ನುವ ತುಕ್ಡೇ ಗ್ಯಾಂಗ್ಗಳು ದೇಶ ಸೋಲಬೇಕು ಎನ್ನುತ್ತಾರೆ ಎಂದರು.
'ನಮ್ಮದು ಹೀನಾಯ ಸೋಲು ಅಲ್ಲ': ಹೊಂದಾಣಿಕೆ ರಾಜಕೀಯದ ಬಗ್ಗೆ ಸಂಸದ ಪ್ರತಾಪ್ ಸಿಂಹ ನೀಡಿದ ಹೇಳಿಕೆಗೆ, ನೋ ಕಾಮೆಂಟ್ಸ್ ಎಂದ ಸಿ.ಟಿ. ರವಿ, ನಾವು ಚುನಾವಣೆಯ ಸೋಲು ಒಪ್ಪಿಕೊಳ್ಳುತ್ತೇವೆ. ಆದರೆ ಹೀನಾಯ ಸೋಲು ಅಲ್ಲ ಎಂದು ಹೇಳಿದರು. ಪ್ರಧಾನಿ ಮೋದಿ ಅವರ 9 ವರ್ಷದ ಸಾಧನೆಯ ಅವಲೋಕನ ಮುನ್ನದ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಿದಾಗ ಮಾತ್ರ ಬದಲಾವಣೆ ಗೋಚರವಾಗುತ್ತದೆ. 2004 ರಿಂದ 2014 ವರೆಗೆ ಮನಮೋಹನ್ ಸಿಂಗ್ ಅಧಿಕಾರ ಇದ್ದಾಗ ಪ್ರತಿನಿತ್ಯ ಹಗರಣ ಸುದ್ದಿಯಾಗುತ್ತಿದ್ದವು.
ಆದರೆ ಮೋದಿ ಕಾಲದಲ್ಲಿ ಹಗರಣ ಸುದ್ದಿಯಾಗಿಲ್ಲ, ಅಭಿವೃದ್ಧಿ ಯೋಜನೆಗಳು ಸುದ್ದಿಯಾಗಿವೆ. ತೆರಿಗೆಯಲ್ಲಿ ಜಿಎಸ್‌ಟಿ ಮೂಲಕ ಸುಧಾರಣೆ ಮಾಡಿ ಅತಿ ಹೆಚ್ಚು ತೆರಿಗೆ ಸಂಗ್ರಹ ಮಾಡಲಾಯಿತು. ಬ್ಯಾಂಕಿಂಗ್ ಕ್ಷೇತ್ರ ಸುಧಾರಿಸಿದೆ. ಒನ್ ನೇಷನ್ ಒನ್ ರೇಷನ್ ಮೂಲಕ ಪಡಿತರ ಕ್ಷೇತ್ರದ ಸುಧಾರಣೆಯಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದುಪಡಿಸುವ ಮೂಲಕ ಕ್ರಾಂತಿಕಾರಿ ಸುಧಾರಣೆ, ರಿಯಲ್ ಎಸ್ಟೇಟ್ ಸುಧಾರಣೆಗೆ ರೇರಾ ತರಲಾಯಿತು ಎಂದರು.
ಇದನ್ನೂ ಓದಿ : ವಿದ್ಯುತ್ ದರ ಏರಿಕೆ: ಬಳ್ಳಾರಿ, ಶಿವಮೊಗ್ಗದಲ್ಲೂ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಪ್ರತಿಭಟನೆ