ಕಡಬ(ದಕ್ಷಿಣ ಕನ್ನಡ): ಯಾವುದೇ ಸರ್ಕಾರಿ ಕಚೇರಿಗಳ ಒಳಗೆ ಮಧ್ಯವರ್ತಿಗಳು, ಬ್ರೋಕರ್ಗಳು ಓಡಾಡದಂತೆ ಎಲ್ಲಾ ಇಲಾಖೆಗಳ ಅಧೀನ ಕಚೇರಿಗಳಿಗೆ ಈಗಾಗಲೇ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ. ಆದರೆ ಕಡಬದಲ್ಲಿ ಮಾತ್ರ ಚಿತ್ರಣ ಬೇರೆಯೇ ಇದೆ.
ಮಾರ್ಚ್ .5 ರಂದು ಇಲ್ಲಿನ ತಹಶೀಲ್ದಾರ್ ಕಚೇರಿಗೆ ಆಗಮಿಸಿದ್ದ ದಲ್ಲಾಳಿಯೋರ್ವರು ಮೇಜಿನ ಮೇಲೆ ರಾಜಾರೋಷವಾಗಿ ಕುಳಿತಿರುವ ದೃಶ್ಯ ಎಲ್ಲೆಡೆ ವೈರಲ್ ಆಗಿತ್ತು. ಸಾರ್ವಜನಿಕರು ತಮ್ಮ ಕೆಲಸಕ್ಕೆ ಬಂದಾಗ ಹೊರ ಭಾಗದಲ್ಲಿ ನಿಂತು ಸಹಕರಿಸುತ್ತಾರೆ. ಆದರೆ ವ್ಯಕ್ತಿ ಕಚೇರಿಯ ಟೇಬಲ್ ಮೇಲೆ ಕುಳಿತುಕೊಳ್ಳುವಷ್ಟು ಅಧಿಕಾರಿಗಳು ಸಲುಗೆ ನೀಡಿದ್ದಾರೆ ಎಂಬುದರ ಕುರಿತಂತೆ ಮಾತುಗಳು ಕೂಡ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿವೆ.
ಕೆಲ ದಿನಗಳಿಂದ ಅಕ್ರಮ-ಸಕ್ರಮ ಫೈಲ್ಗಳ ಕೆಲಸಗಳು ಆಗುತ್ತಿದ್ದು, ಮಧ್ಯವರ್ತಿಗಳಿಂದ ಅಧಿಕಾರಿಗಳಿಗೆ ಇದು ಸುಗ್ಗಿಕಾಲವಾಗಿದೆ. ಜನಗಳು ಕೂಡ ದುಡ್ಡು ಕೊಡುವುದರಲ್ಲಿ ಮುಂದಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಟೇಬಲ್ ಮೇಲೆ ವ್ಯಕ್ತಿ ಕುಳಿತುಕೊಂಡಿರುವುದು ನನ್ನ ಗಮನಕ್ಕೆ ಬಂದಿದೆ. ನಮ್ಮ ಸಿಬ್ಬಂದಿಯ ವರ್ತನೆ ಖಂಡಿನೀಯ. ಈ ಕೂಡಲೇ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು. ಕಚೇರಿಯೊಳಗೆ ವ್ಯಕ್ತಿ ಪ್ರವೇಶ ಮಾಡಿದ ಬಗ್ಗೆಯೂ ಪರಿಶೀಲನೆ ಮಾಡಲಾಗುವುದು. ಈ ಬಗ್ಗೆ ದೂರು ನೀಡಲಾಗುವುದು ಎಂದು 'ಈಟಿವಿ ಭಾರತ'ಕ್ಕೆ ಕಡಬ ತಹಶೀಲ್ದಾರ್ ಅನಂತ ಶಂಕರ್ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಉಕ್ರೇನ್ನಲ್ಲಿ ಮೃತಪಟ್ಟ ಹಾವೇರಿಯ ನವೀನ್ ಕುಟುಂಬಕ್ಕೆ ಸರ್ಕಾರದಿಂದ ₹25 ಲಕ್ಷ ಪರಿಹಾರ