ಬಂಟ್ವಾಳ(ದ.ಕ.): ಗಡಿ ಸಮಸ್ಯೆ ಹಿನ್ನೆಲೆ ದಾರಿ ತಪ್ಪಿ ಪರದಾಡುತ್ತಿದ್ದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಯೊಬ್ಬನಿಗೆ ಶಿಕ್ಷಕರ ಸಕಾಲಿಕ ನೆರವು ಪರೀಕ್ಷೆ ಬರೆಯುವಂತೆ ಮಾಡಿದೆ. ಇದು ನಿನ್ನೆ ಬಂಟ್ವಾಳದ ಮುಡಿಪು ಪರೀಕ್ಷಾ ಕೇಂದ್ರದಲ್ಲಿ ನಡೆದ ಘಟನೆ.
ಸಾಲೆತ್ತೂರಿನ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ತಂಝೀರ್ ಕಳೆದ ಎಲ್ಲ ಪರೀಕ್ಷೆಗಳಿಗೂ ಹಾಜರಾಗಿದ್ದು, ಶುಕ್ರವಾರ ಪರೀಕ್ಷೆಗೆ ಸಮಯಕ್ಕೆ ಸರಿಯಾಗಿ ಬರಲಿಲ್ಲ.
ಮುಡಿಪು ಪರೀಕ್ಷಾ ಕೇಂದ್ರಕ್ಕೆ ನಿತ್ಯ ಸ್ವಂತ ವಾಹನದಲ್ಲಿ ಮನೆಯವರೊಂದಿಗೆ ಬರುತ್ತಿದ್ದ ಈತ ಬಾರದಿರುವ ಬಗ್ಗೆ ಆತನ ಗೆಳೆಯರು ಕೇರಳದ ಬಸ್ ವ್ಯವಸ್ಥೆಯ ನೋಡಲ್ ವಿನಾಯಕ ಮತ್ತು ರಾಘವೇಂದ್ರ ಅವರಿಗೆ ತಿಳಿಸಿ, ಮನೆಯವರ ಸಂಪರ್ಕ ಮಾಡಿದರು.
ಮನೆಯವರು ನೀಡಿದ ನಂಬರ್ಗಳು ಸ್ವಿಚ್ ಆಫ್ ಆಗಿತ್ತು. ಬಳಿಕ ಸಂಬಂಧಿಕರ ದೂರವಾಣಿ ಸಂಖ್ಯೆ ದೊರಕಿದ್ದು, ಅವನು ಮನೆಯಿಂದ ಹೊರಟ ಬಗ್ಗೆ ತಿಳಿಸಿದರು. ಆದರೆ ನಿತ್ಯ ಬರುತ್ತಿದ್ದ ದಾರಿಗಳನ್ನು ಮುಚ್ಚಿದ ಕಾರಣ ವಿದ್ಯಾರ್ಥಿ ದಾರಿ ತಪ್ಪಿದ್ದ.
ಶಿಕ್ಷಕರು ಎಲ್ಲ ಗಡಿಗಳನ್ನು ಸ್ವಂತ ವಾಹನದಲ್ಲಿ ಹೋಗಿ ಪರಿಶೀಲಿಸಿದಾಗ ವಿದ್ಯಾರ್ಥಿ ಮತ್ತು ಅವನ ಅಣ್ಣ ಬರುತ್ತಿರುವ ಮಾಹಿತಿ ಗೊತ್ತಾಗಿದೆ. ಕೂಡಲೇ ಶಿಕ್ಷಕರು ಆತನನ್ನು ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಕ್ಕೆ ತಲುಪಿಸುವಲ್ಲಿ ಯಶಸ್ವಿಯಾದರು.