ಕಡಬ (ದಕ್ಷಿಣ ಕನ್ನಡ): ಬಾಲಕನೊಬ್ಬನು ಕಿಂಡಿ ಅಣೆಕಟ್ಟಿನಯ ತಡೆಗೋಡೆಯ ಮುಟ್ಟಿದ್ದು, ಆ ತಡೆಗೋಡೆ ಬಾಲಕನ ಮೇಲೆನೇ ಕುಸಿದು ಬಿದ್ದ ಘಟನೆ ಇಲ್ಲಿನ ಕೋಡಿಂಬಾಳ ಗ್ರಾಮದ ಕುತ್ಯಾಡಿ ಎಂಬಲ್ಲಿ ನಡೆದಿದೆ.
ಕುತ್ಯಾಡಿ ನಿವಾಸಿ ಮೋನಪ್ಪ ಗೌಡ ಎಂಬವರ ಪುತ್ರ ಧನ್ವಿತ್ (10) ತಡೆಗೋಡೆಯನ್ನು ಮುಟ್ಟಿದ್ದನು. ಈ ವೇಳೆ ತಡೆಗೋಡೆ ಧನ್ವಿತ್ ಮೇಲೆ ಬಿದ್ದಿದ್ದು, ತಡೆಗೋಡೆ ಜೊತೆಗೆ ಧನ್ವಿತ್ ತೋಡಿಗೆ ಬಿದ್ದಿದ್ದಾನೆ. ಈ ಸಂದರ್ಭದಲ್ಲಿ ಸಮೀಪದಲ್ಲಿದ್ದ ಸಹೋದರ ದಕ್ಷಿತ್ ಸಹಾಯಕ್ಕಾಗಿ ಮನೆಯವರನ್ನು ಕೂಗಿ ಕರೆದಿದ್ದಾನೆ. ಮನೆಯಲ್ಲಿದ್ದ ಧನ್ವಿತ್ ತಾಯಿ ವಾರಿಜ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ್ದಾರೆ. ಆದ್ರೆ ತೋಡಿಗೆ ಇಳಿಯಲಾಗದೆ ಇತರನ್ನು ಸಹಾಯಕ್ಕಾಗಿ ಕರೆದಿದ್ದಾರೆ. ಈ ವೇಳೆ ನೆರೆಮನೆಯ ವ್ಯಕ್ತಿಯೊಬ್ಬರು ಆಗಮಿಸಿ ತಡೆಗೋಡೆಯ ಅಡಿಯಲ್ಲಿ ಸಿಲುಕಿಕೊಂಡಿದ್ದ ಬಾಲಕನ್ನು ಮೇಲಕ್ಕೆತ್ತಿದ್ದಾರೆ.
ಘಟನೆಯಲ್ಲಿ ಧನ್ವಿತ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಗೊಂಡ ಬಾಲಕನನ್ನು ತಕ್ಷಣ ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಕಳಪೆ ಕಾಮಗಾರಿಯೇ ತಡೆಗೋಡೆ ಕುಸಿಯಲು ಕಾರಣ?
ಕಿಂಡಿ ಅಣೆಕಟ್ಟಿನ ತಡೆಗೋಡೆಯು ಸಿಮೆಂಟ್ ಇಟ್ಟಿಗೆಯಲ್ಲಿ ನಿರ್ಮಿಸಿದ್ದಾರೆ. ಸುಮಾರು 3 ಲಕ್ಷ ಅನುದಾನದಲ್ಲಿ ಈ ತಡೆಗೋಡೆ ನಿರ್ಮಿಸಿದ್ದು, ಕಳಪೆ ಕಾಮಗಾರಿ ನಡೆಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.