ಮಂಗಳೂರು: ಬಿಜೆಪಿ ನೂತನ ಜಿಲ್ಲಾಧ್ಯಕ್ಷರ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸೋಮವಾರ ನಡೆಯಿತು.
ಈ ಸಂದರ್ಭ ಮೀನುಗಾರಿಕೆ, ಬಂದರು, ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಜಿಲ್ಲಾ ಘಟಕದ ಅಧ್ಯಕ್ಷ ಬಂದಾಗ ಸಚಿವನೂ ಎದ್ದು ನಿಲ್ಲಬೇಕು. ಯಾಕೆಂದರೆ ಪಕ್ಷದ ಸಂಘಟನೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷನ ಪಾತ್ರ ಮಹತ್ತರವಾದದ್ದು, ಆತ ಮಂತ್ರಿಗಿಂತಲೂ ದೊಡ್ಡವ. ಆದ್ದರಿಂದ ನೂತನ ಜಿಲ್ಲಾಧ್ಯಕ್ಷ ಸುದರ್ಶನ ಎಂ. ಅವರ ಸ್ಥಾನ ರಾಜಕೀಯ ದೃಷ್ಟಿಯಿಂದ ನಮ್ಮೆಲ್ಲರಿಗಿಂತಲೂ ಮಿಗಿಲಾದುದು ಎಂದರು.
'ಭಾರತ್ ಮಾತಾ ಕೀ ಜೈ' ಎನ್ನುವ ಕಾಲದಲ್ಲಿ ಹಾಗೂ ಇಡೀ ವಿಶ್ವವೇ ಭಾರತದ ಕಡೆ ನೋಡುವಂತಹ ಕಾಲ ಘಟ್ಟ ಮತ್ತು 'ಪಾಕಿಸ್ತಾನಕ್ಕೆ ಜಿಂದಾಬಾದ್' ಎನ್ನುವವರ ನಡುವೆ ನಾವಿದ್ದೇವೆ. ಅದರಲ್ಲೂ ದ.ಕ. ಜಿಲ್ಲೆಯ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಮೇಲ್ಮನೆಯಲ್ಲಿ ಮೂರು ದಿನಗಳ ಕಾಲ ಸಾಕಷ್ಟು ಚರ್ಚೆ ನಡೆದಿದೆ. ಸಿಎಂ ಯಡಿಯೂರಪ್ಪ ಸಹ ಮಾತನಾಡಿ, ಯಾವುದೇ ಕಾರಣಕ್ಕೂ ರಾಷ್ಟ್ರ ವಿರೋಧಿ ಶಕ್ತಿಗಳನ್ನು ಕರ್ನಾಟಕ ರಾಜ್ಯದಲ್ಲಿ ಸಹಿಸೋದಿಲ್ಲ ಎಂಬ ಎಚ್ಚರಿಕೆ ನೀಡಿದ್ದಾರೆ ಎಂದರು.
ಇದೇ ವೇಳೆ, ಸುದರ್ಶನ ಮೂಡುಬಿದಿರೆ ಮಾತನಾಡಿ, ಬಿಜೆಪಿ ಜಿಲ್ಲಾಧ್ಯಕ್ಷಾಗಿ ಅಧಿಕಾರ ಸ್ವೀಕರಿಸಿರುವ ನನ್ನ ಮುಂದೆ ಅನೇಕ ಸವಾಲುಗಳಿವೆ. ಆ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸಬಲ್ಲೆ ಎಂಬ ಆತ್ಮವಿಶ್ವಾಸ ನನ್ನಲ್ಲಿದೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲು, ಸಿಎಂ ಆಗಿ ಯಡಿಯೂರಪ್ಪ ಹಾಗೂ ಜಿಲ್ಲೆಯಲ್ಲಿರುವ ಏಳು ಮಂದಿ ಶಾಸಕರಿರುವಾಗ ನನಗೆ ಆತ್ಮವಿಶ್ವಾಸದ ಕೊರತೆ ಬರೋದಿಲ್ಲ ಎಂದು ವಿಶ್ವಾಸವನ್ನೂ ವ್ಯಕ್ತಪಡಿಸಿದರು.