ಬಂಟ್ವಾಳ (ದಕ್ಷಿಣ ಕನ್ನಡ): ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆ ಪ್ರಚಾರ ಕಾರ್ಯಗಳು ಜೋರಾಗಿಯೇ ನಡೆಯುತ್ತಿದೆ. ಎಲ್ಲ ಅಭ್ಯರ್ಥಿಗಳು ಒಂದಷ್ಟು ಕಾರ್ಯಕರ್ತರ ಜೊತೆ ಮನೆ ಮನೆಗೆ ತೆರಳಿ ಮತ ಯಾಚಿಸುತ್ತಿದ್ದಾರೆ. ಹೀಗೆ ಚುನಾವಣೆ ಪ್ರಚಾರಕ್ಕೆಂದು ತೆರಳಿದ್ದ ಬಿಜೆಪಿ ಕಾರ್ಯಕರ್ತರೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಕಲಾಯಿ ಎಂಬಲ್ಲಿ ಶುಕ್ರವಾರ ನಡೆದಿದೆ.
ವೃತ್ತಿಯಲ್ಲಿ ಛಾಯಾಗ್ರಾಹಕರಾಗಿರುವ ಇಲ್ಲಿನ ನಿವಾಸಿ ಪ್ರವೀಣ್ ನಾಯಕ್( 45) ಮೃತಪಟ್ಟವರು. ಪ್ರವೀಣ್ ಮತ್ತು ತಂಡ ಅವರ ನಿವಾಸದ ಪರಿಸರದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಅವರ ಪರ ಮನೆ ಮನೆಗೆ ತೆರಳಿ ಮತಯಾಚನೆ ನಡೆಸುತ್ತಿದ್ದರು. ಈ ವೇಳೆ, ಮಧ್ಯಾಹ್ನ ಸುಮಾರು 1.30 ಗಂಟೆಯ ವೇಳೆಗೆ ಪ್ರವೀಣ್ ಎದೆ ನೋವೆಂದು ಕುಸಿದು ಬಿದ್ದರು.
ತಕ್ಷಣವೇ ಅವರನ್ನು ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದರು. ಮೃತರು ಪತ್ನಿ, ಪುತ್ರ, ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಮುಲ್ಕಾಜೆ ಮಾಡದಲ್ಲಿ ಪ್ರವೀಣ್ ಡಿಜಿಟಲ್ ಸ್ಟುಡಿಯೋ ನಡೆಸುತ್ತಿದ್ದ ಅವರು ಸೌಮ್ಯ ವ್ಯಕ್ತಿತ್ವದಿಂದ ಜನಾನುರಾಗಿಯಾಗಿದ್ದರು.
ಇದನ್ನೂ ಓದಿ: ಜೆಡಿಎಸ್ ಭದ್ರಕೋಟೆ ಹಾಸನದಲ್ಲಿ ರಂಗು ಪಡೆದುಕೊಂಡ ಚುನಾವಣೆ: ಜೆಡಿಎಸ್ - ಬಿಜೆಪಿ ನಡುವೆ ಪೈಪೋಟಿ