ಮಂಗಳೂರು: ಉಪಚುನಾವಣೆಯಲ್ಲಿ ನಾವೇ ಗೆಲ್ಲೋದು ಬಿಜೆಪಿಗೆ ಬಹುಮತ ಬರಲ್ಲ. ಬಹುಮತ ಬರಲಿಲ್ಲ ಅಂದ್ರೆ ಯಡಿಯೂರಪ್ಪ ರಾಜಿನಾಮೆ ಕೊಡಬೇಕಾಗುತ್ತೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿ, 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಗರಿಷ್ಠ ಹನ್ನೆರಡು ಸ್ಥಾನಗಳಲ್ಲಿ ನಾವೇ ಗೆಲ್ಲೋದು. ಬಿಜೆಪಿಯವರು ಕನಿಷ್ಠ 8 ಸ್ಥಾನವನ್ನು ಪಡೆಯದಿದ್ದರೆ ಅವರಿಗೆ ಬಹುಮತ ಬರಲ್ಲ. ಈಗ 105 ಸ್ಥಾನವಿದೆ ಇನ್ನು ಎಂಟು ಸ್ಥಾನಗಳಲ್ಲಿ ಗೆದ್ದರೆ ಮಾತ್ರ 113 ಆಗೋದು. ಅವರು ಎಂಟು ಸ್ಥಾನಗಳಲ್ಲಿ ಗೆಲ್ಲದಿದ್ದರೆ ಯಡಿಯೂರಪ್ಪ ರಾಜಿನಾಮೆ ನೀಡಬೇಕು. ಹಾಗಾಗಿ ಮತ್ತೆ ಚುನಾವಣೆ ಬರಬಹುದು. ಬಿಜೆಪಿಗರು ಅವರ ಪ್ರಣಾಳಿಕೆ ಪ್ರಕಾರ ಕೆಲಸ ಮಾಡಲೇ ಇಲ್ಲ. ರಾಜ್ಯ, ರಾಷ್ಟ್ರ, ಪಾಲಿಕೆ ಮಟ್ಟದಲ್ಲಿಯೂ ಪ್ರಣಾಳಿಕೆ ಪ್ರಕಾರ ಯಾವತ್ತೂ ಬಿಜೆಪಿಗರು ಕೆಲಸ ಮಾಡಿಲ್ಲ. ಈ ಬಾರಿ ವಾರ್ಡ್ ಕಮಿಟಿ ಮಾಡಲಾಗುತ್ತದೆ. ಈ ಬಾರಿ ನಗರಪಾಲಿಕೆ ಚುನಾವಣೆಯಲ್ಲಿ ನಾವೇ ಆಡಳಿತ ನಡೆಸುತ್ತೇವೆ ಎಂದರು.
ನಮ್ಮ ಸರ್ಕಾರ ಟಿಪ್ಪು ಜಯಂತಿ ಆಚರಣೆ ಮಾಡಲು ತೀರ್ಮಾನ ಮಾಡಿತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಮಾಡೋದಿಲ್ಲ ಎಂದಿದ್ದಾರೆ. ಹೈಕೋರ್ಟ್ ಟಿಪ್ಪು ಜಯಂತಿ ಮಾಡಿ ಎಂದು ಸರಕಾರಕ್ಕೆ ನಿರ್ದೇಶನ ಮಾಡಿಲ್ಲ. ಬೇರೆ ಸಂಘ ಸಂಸ್ಥೆಗಳು ಮಾಡಬಹುದು ಎಂದು ಆದೇಶಿಸಿದೆ. ನಾವು ಬರೀ ಟಿಪ್ಪು ಜಯಂತಿ ಮಾತ್ರವಲ್ಲ ಅನೇಕ ಐತಿಹಾಸಿಕ ಪುರುಷರ ಜಯಂತಿಯನ್ನು ಆಚರಣೆ ಮಾಡಿದ್ದೇವೆ ಎಂದು ಹೇಳಿದರು.
ಮಂಗಳೂರಿಗೆ ನಮ್ಮಷ್ಟು ಯಾರೂ ಅನುದಾನ ಕೊಟ್ಟಿಲ್ಲ: ಐದು ವರ್ಷಗಳಲ್ಲಿ ಮಂಗಳೂರು ನಗರ ಪಾಲಿಕೆಗೆ ನಮ್ಮ ಸರಕಾರ ಹಣ ಕೊಟ್ಟಷ್ಟು ಯಾವ ಸರಕಾರವೂ ನೀಡಿಲ್ಲ. ಇಂದು ಅನೇಕ ಅಭಿವೃದ್ಧಿ ಕೆಲಸಗಳು ಮಂಗಳೂರು ನಗರದಲ್ಲಿ ಆಗಿದ್ದರೆ ಅದು ಕಾಂಗ್ರೆಸ್ ಸರಕಾರದ ಕಾಲದಲ್ಲಿ ಆಗಿರೋದು. ನಮ್ಮ ಸರಕಾರ 1400 ಕೋಟಿ ರೂ. ಮಂಗಳೂರಿಗೆ ನೀಡಿತ್ತು. ಅಲ್ಲದೆ ಎರಡೂ ವಿಧಾಸಭಾಕ್ಷೇತ್ರಗಳ ಪೈಕಿ ಒಂದಕ್ಕೆ 2500 ಸಾವಿರ ಕೋಟಿ ರೂ. ಮತ್ತೊಂದಕ್ಕೆ 1460 ಕೋಟಿ ರೂ. ನೀಡಲಾಗಿತ್ತು. ಬಿಜೆಪಿ ಈ ರೀತಿಯಲ್ಲಿ ಅನುದಾನವನ್ನು ಯಾವಾಗ ನೀಡಿದೆ ಹೇಳಲಿ ಎಂದು ಸವಾಲೆಸೆದರು.
ಆಡಿಯೋ ಲೀಕ್ ಮಾಡಿದ್ದೇ ಬಿಜೆಪಿಯವರು: ಆಡಿಯೋ ಲೀಕ್ ಮಾಡಿದವರೇ ಬಿಜೆಪಿಗರು. ಯಡಿಯೂರಪ್ಪನ ಮೇಲೆ ಗೂಬೆ ಕೂರಿಸಬೇಕೆನ್ನುವುದೇ ಅವರ ಉದ್ದೇಶ. ಅಮಿತ್ ಷಾಗೆ ಮುಜುಗರ ಆಗಬೇಕು. ಯಡಿಯೂರಪ್ಪ ನವರ ಸರಕಾರ ಹೋಗಬೇಕೆನ್ನುವುದೇ ಅವರ ಉದ್ದೇಶ. ಇದರಲ್ಲಿ ಸಫಲ ಆಗ್ತಾರೋ ಬಿಡ್ತಾರೋ ಗೊತ್ತಿಲ್ಲ ಆದರೆ ಕುತಂತ್ರ ಅಂತೂ ನಡೆದಿದೆ. ಇಡೀ ದೇಶದಲ್ಲಿ ಬಿಜೆಪಿಯವರು ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡಿ ಇಡಿ, ಐಟಿ ಹಾಗೂ ಸಿಬಿಐ ದಾಳಿ ನಡೆಸಿದ್ದಾರೆ ಎಂದರು.