ಉಪ್ಪಿನಂಗಡಿ: ಮಹಾತ್ಮ ಗಾಂಧೀಜಿಯವರ 150ನೇ ಜಯಂತಿ ಅಂಗವಾಗಿ ಬಿಜೆಪಿ ಆರಂಭಿಸಿರುವ ಗಾಂಧಿ ಸಂಕಲ್ಪ ಯಾತ್ರೆಗೆ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉಪ್ಪಿನಂಗಡಿಯ ಕಾಂಚನದಲ್ಲಿ ಮಂಗಳವಾರ ದಕ್ಷಿಣ ಕನ್ನಡ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಲವಾರು ಪುಣ್ಯ ವ್ಯಕ್ತಿಗಳ ತ್ಯಾಗ - ಬಲಿದಾನ, ನಿರಂತರವಾದ ಹೋರಾಟದ ಫಲವಾಗಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಈ ಹೋರಾಟಗಾರರೆಲ್ಲಾ ದೇಶ ಭಕ್ತರಾಗಿದ್ದು, ಇವರು ಭಾರತ ರತ್ನಕ್ಕೆ ಅರ್ಹರು ಎಂದರು. ಇನ್ನು ಅಧಿಕಾರಕ್ಕಾಗಿ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಹೇಳನ ಮಾಡುವವರು ನಿಜವಾದ ದೇಶ ದ್ರೋಹಿಗಳು ಎಂದರು.
ಬಿಜೆಪಿಯ ಹಿರಿಯ ಕಾರ್ಯಕರ್ತ ಭಾಸ್ಕರ್ ನಾಯಕ್ ಪೊರೋಳಿ ರಾಷ್ಟ್ರ ಧ್ವಜವನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ಅವರಿಗೆ ಹಸ್ತಾಂತರಿಸುವ ಮೂಲಕ ಗಾಂಧಿ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದರು. ವಾಸುದೇವ ರೆಂಜಾಳ ಗಾಂಧಿ ವೇಷಧಾರಿಯಾಗಿ ಯಾತ್ರೆಯೊಂದಿಗೆ ಸಾಗಿದರು. ಇನ್ನು ಯಾತ್ರೆಯು ಪುತ್ತೂರು ವಿಧಾನಸಭಾ ಕ್ಷೇತ್ರದಾದ್ಯಂತ 13 ದಿನಗಳ ಕಾಲ ಸಂಚರಿಸಲಿದೆ.