ಕಡಬ: ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಡಬ ಸಮುದಾಯ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಸಚಿವ ಎಸ್.ಅಂಗಾರ, ಈತನಕ ಹೋಮ್ ಐಸೋಲೇಷನ್ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿತ್ತು. ಆದರೆ ಪಾಸಿಟಿವ್ ಬಂದ ವ್ಯಕ್ತಿಗಳೇ ಕೊರೊನಾ ನಿಯಮಗಳನ್ನು ಉಲ್ಲಂಘನೆ ಮಾಡಿ ಸ್ವತಃ ಮನೆಯವರ ಬಗ್ಗೆಯೂ ಕಾಳಜಿ ತೋರಿಸದೇ ತಿರುಗಾಡುತ್ತಿರುವ ಬಗ್ಗೆ ಹಲವಾರು ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಅಂಥವರನ್ನು ಕೋವಿಡ್ ಸೆಂಟರ್ಗಳಿಗೆ ಸ್ಥಳಾಂತರ ಮಾಡಲಾಗುವುದು ಎಂದು ಹೇಳಿದರು.
ಕಡಬ ಸಮುದಾಯ ಆಸ್ಪತ್ರೆಯಲ್ಲಿ ಕೂಡಲೇ ಆಕ್ಸಿಜನ್ ಪ್ಲಾಂಟ್ ಕಾರ್ಯಾಚರಣೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗಿದೆ ಎಂದು ಅವರು ಹೇಳಿದರು. ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಂಜದಲ್ಲಿ, ಕುಕ್ಕೆ ಸುಬ್ರಹ್ಮಣ್ಯ ಹಾಗೂ ನೆಲ್ಯಾಡಿ ವ್ಯಾಪ್ತಿಯಲ್ಲೂ ಕೋವಿಡ್ ಸೆಂಟರ್ಗಳನ್ನು ಆರಂಭಿಸಲಾಗಿದೆ ಎಂದು ಎಸ್.ಅಂಗಾರ ಹೇಳಿದರು.
![ದಿನಸಿ ಕಿಟ್ ವಿತರಣೆ](https://etvbharatimages.akamaized.net/etvbharat/prod-images/kn-dk-02-ministervisit-avb-vis-kac10008_24052021172409_2405f_1621857249_281.jpg)
ನಂತರ ಎಸ್.ಅಂಗಾರ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ವಿದ್ಯುತ್ ಅಪಘಾತದಲ್ಲಿ ಇಂದು ಬೆಳಗ್ಗೆ ಮೃತಪಟ್ಟ ಕುಟ್ರುಪಾಡಿ ನಿವಾಸಿ ಲಿಜೋ ಅವರ ಮೃತದೇಹಕ್ಕೆ ಅಂತಿಮ ನಮನ ಸಲ್ಲಿಸಿದರು. ಈ ಸಮಯದಲ್ಲಿ ದಾನಿಗಳ ಸಹಕಾರದೊಂದಿಗೆ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಸೇವಾ ಭಾರತಿ ಮತ್ತು ಸಚಿವರ ವಾರ್ ರೂಂ ಮೂಲಕ ಕೊಡಮಾಡಿದ ದಿನಸಿ ಕಿಟ್ಗಳನ್ನು ಕಡಬ ಸಮುದಾಯ ಆಸ್ಪತ್ರೆಯ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ವಿತರಿಸಿದರು.