ಮಂಗಳೂರು: ಕೇಂದ್ರದಲ್ಲಿ 85 % ಕಮೀಷನ್ ಪಡೆಯುತ್ತಿದ್ದವರಿಂದ ರಾಜ್ಯ ಸರ್ಕಾರದ ಮೇಲೆ 40 % ಕಮಿಷನ್ ಆರೋಪ ಮಾಡಲಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ ಆರೋಪಿಸಿದರು. ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಂಚ ಬೇಡಿಕೆ ಇಡುವುದು ಸ್ವೀಕರಿಸುವುದು ಅಪರಾಧ. ಹಾಗೆ ಲಂಚ ಕೊಡುವುದು ಕೂಡ ಅಪರಾಧ ಎಂದರು.
ಲಂಚ ಸ್ವೀಕರಿಸಿದವರ ಹೆಸರು ಮಾಹಿತಿ ಮುಚ್ಚಿಡುವುದು ಕೂಡ ಅಪರಾಧ. ಅತಂಹ ಪ್ರಕರಣಗಳಿದ್ದರೆ ಸಂಪೂರ್ಣ ಸಾಕ್ಷಾಧಾರಗಳೊಂದಿಗೆ ಪ್ರಕರಣ ದಾಖಲಿಸಬೇಕು. ಕೇವಲ ಆರೋಪ ಮಾಡಿದರೆ ಕಾನೂನಿನ ದೃಷ್ಟಿಯಲ್ಲಿ ತಪ್ಪಾಗುತ್ತದೆ. ಈ ಹಿಂದೆ 85% ಕಮಿಷನ್ ಸರ್ಕಾರ ಹೊಂದಿದ್ದ ಪಕ್ಷದವರೆ ಈ ಆರೋಪ ಮಾಡುತ್ತಿರುವುದು ಹಾಸ್ಯಾಸ್ಪದ. ಭ್ರಷ್ಟ ಕಾಂಟ್ರಾಕ್ಟರ್ಗಳ ಬಗ್ಗೆ ಕಾಂಗ್ರೆಸ್ನವರಿಗೆ ಯಾಕಿಷ್ಟು ಸಹಾನುಭೂತಿ ಎಂದು ಪ್ರಶ್ನಿಸಿದರು.
ಅಝಾನ್ ಬಗ್ಗೆ ಈಗಾಗಲೇ ಸುಪ್ರೀಂ ಕೋರ್ಟ್ ಅದೇಶ ನೀಡಿದೆ. ಮುಸ್ಲಿಂ ರಾಷ್ಟ್ರಗಳಾದ ಸೌದಿ ಅರೇಬಿಯಾ ಮತ್ತು ಇಂಡೋನೇಷ್ಯಾ ಸ್ಪೀಕರ್ನಲ್ಲಿ ಅಝಾನ್ ಕೂಗುವುದನ್ನು ನಿಷೇಧಿಸಿದೆ. ಅಝಾನ್ ವಿಚಾರವನ್ನು ನಮ್ಮಲ್ಲಿ ರಾಜಕೀಯ ವಿಚಾರವಾಗಿಸಲಾಗುತ್ತಿದೆ. ಲವ್ ಜಿಹಾದ್ ಪದ ಮೊದಲು ಬಳಕೆ ಮಾಡಿದ್ದು ಬಿಜೆಪಿ ಅಥವಾ ಆರ್ಎಸ್ಎಸ್ ಅಲ್ಲ. ಕೇರಳದ ಮಾಜಿ ಮುಖ್ಯಮಂತ್ರಿ ವಿ ಸ್ ಅಚ್ಯುತಾನಂದನ್ ಅವರು ಮಾಡಿದ್ದರು. ಕೇರಳ ಹೈಕೋರ್ಟ್ಗೆ ಸಲ್ಲಿಸಿದ ವರದಿಯ ಆಧಾರದ ಮೇಲೆ ಅಚ್ಯುತಾನಂದನ್ ಈ ಹೇಳಿಕೆ ನೀಡಿದ್ದರು ಎಂದರು.
ಕಾಂಗ್ರೆಸ್ ಮನಸ್ಥಿತಿ ಯಾವತ್ತಿಗೂ ಬದಲಾಗಲ್ಲ- ಸುಧಾಂಶು ತ್ರಿವೇದಿ: ಕಾಂಗ್ರೆಸ್ ನಿಂದ ನಿರುದ್ಯೋಗಿಗಳಿಗೆ ಗ್ಯಾರಂಟಿ ನೀಡಿರುವುದು ಒಂದು ಮೋಸ. ರಾಜಸ್ಥಾನದಲ್ಲಿ 5000 ಕೊಡ್ತೇವೆ ಅಂತಾ ಹೇಳಿದವರು ಅದನ್ನು ಕೊಟ್ಟಿಲ್ಲ. ಛತ್ತೀಸ್ ಗಡದಲ್ಲಿಯೂ ನೀಡಿದ ಭರವಸೆ ಈಡೇರಿಸಿಲ್ಲ. ಕಾಂಗ್ರೆಸ್ ಹೇಳಿದ್ದನ್ನು ಯಾವತ್ತಿಗೂ ಮಾಡಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಚುನಾವಣೆ ಗೆಲ್ಲುವ ಮೊದಲೇ ನಾಯಕರಿಬ್ಬರು ಮುಖ್ಯಮಂತ್ರಿ ಗಾದಿಗಾಗಿ ಕಚ್ಚಾಟ ನಡೆಸುತಿದ್ದಾರೆ. ಇಲ್ಲಿ ಮಾತ್ರವಲ್ಲ ರಾಜಸ್ಥಾನ ಮತ್ತು ಛತ್ತೀಸ್‍ಗಡದಲ್ಲೂ ಮುಖ್ಯಮಂತ್ರಿ ಗಾದಿಗೆ ಕಾಂಗ್ರೆಸ್ ನಾಯಕರುಗಳು ಕಚ್ಚಾಟ ನಡೆಸುತಿದ್ದಾರೆ. ಕಾಂಗ್ರೆಸ್ ಮನಸ್ಥಿತಿ ಯಾವತ್ತಿಗೂ ಬದಲಾಗಲ್ಲ ಎಂದು ಹೇಳಿದರು.
ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ದೇಶದಲ್ಲಿ ಕಾನೂನು ಸುವ್ಯವಸ್ಥೆ ಸುಧಾರಣೆಯಾಗಿದೆ. ಭಯೋತ್ಪಾದನೆ ಗಣನೀಯವಾಗಿ ಇಳಿಮುಖಗೊಂಡಿದೆ. ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳ ಸಮರ್ಪಕ ಅನುಷ್ಠಾನವಾಗಿದೆ. ದೇಶದ ಭದ್ರತೆ ಹಾಗೂ ಸುರಕ್ಷತೆಗಾಗಿ ಇಂದು ಬಿಜೆಪಿ ಮಾತ್ರ ಭರವಸೆಯಾಗಿದೆ. ದೇಶಕ್ಕೆ ಕಂಟಕವಾಗಿದ್ದ ಪಿಎಫ್‌ಐ ಸಂಘಟನೆಯನ್ನು ಕೇಂದ್ರ ಬಿಜೆಪಿ ಸರ್ಕಾರ ನಿಷೇಧಿಸಿದೆ. ಆದರೆ, ಕರ್ನಾಟಕದಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರ ಎಸ್‌ಡಿಪಿಐ, ಪಿಎಫ್‌ಐ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆದಿತ್ತು ಎಂದರು.
ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಆರೋಪಿ ಬಗ್ಗೆ ಕಾಂಗ್ರೆಸ್ ಮೃದು ಧೋರಣೆ ತಳೆದಿದೆ. ಆತನನ್ನು ಅಮಾಯಕ ಎಂದು ಕೂಡ ಬಿಂಬಿಸಿದೆ. ಕಾಂಗ್ರೆಸ್ ಮುಖಂಡರೊಬ್ಬರು ಆರೋಪಿಯನ್ನು ‘ಬ್ರದರ್’ ಎಂದು ಸಂಬೋಧಿಸಿದ್ದಾರೆ. ಯಾಕೂಬ್ ಮೆಮನ್, ಅಫ್ಜಲ್ ಗುರು, ಝಾಕೀರ್ ನಾಯ್ಕ್ ಸಹಿತ ಭಯೋತ್ಪಾದಕರ ಬಗ್ಗೆ ಕಾಂಗ್ರೆಸ್ ಇದೇ ರೀತಿಯ ಅನುಕಂಪ ಹೊಂದಿದೆ ಎಂದು ಟೀಕಿಸಿದರು.
ಕೇಂದ್ರದಿಂದ ರಾಜ್ಯಕ್ಕೆ ದೊರೆಯುವ ಹಣಕಾಸು ನೆರವು ಶೇ.25ರಷ್ಟು ಹೆಚ್ಚಳ: ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಕೊರೊನಾ ಸಮಸ್ಯೆ ಹೊರತಾಗಿಯೂ ಕಳೆದ ಒಂದು ವರ್ಷದಲ್ಲಿ ರಾಜ್ಯದ ಆದಾಯ 17ರಷ್ಟು ಹೆಚ್ಚಳಗೊಂಡಿದೆ. ಜಿಡಿಪಿ ಮತ್ತು ತಲಾ ಆದಾಯ ಏರಿಕೆಯಾಗಿದೆ. ಕೇಂದ್ರದಿಂದ ರಾಜ್ಯಕ್ಕೆ ದೊರೆಯುವ ಹಣಕಾಸು ನೆರವು ಶೇ.25ರಷ್ಟು ಹೆಚ್ಚಳಗೊಂಡಿದೆ. ಕಿಸಾನ್ ಸಮ್ಮಾನ್ ನಿಧಿ 53.83ಲಕ್ಷ ರೈತರಿಗೆ ದೊರೆತಿದೆ. ಗರೀಬ್ ಕಲ್ಯಾಣ ಅನ್ನ ಯೋಜನೆ ಪ್ರಯೋಜನವನ್ನು 4.43 ಕೋಟಿ ಜನರು ಪಡೆದಿದ್ದಾರೆ. 27 ಲಕ್ಷ ಜನರು ಆಯುಷ್ಮಾನ್ ಭಾರತ್ ಯೋಜನೆ ಪ್ರಯೋಜನ ಗಳಿಸಿದ್ದಾರೆ. ಉಜ್ವಲ ಸಹಿತ ವಿವಿಧ ಯೋಜನೆ ಲಾಭ ರಾಜ್ಯಕ್ಕೆ ದೊರೆತಿದೆ ಎಂದರು.
ಬಿಜೆಪಿ ಸರ್ಕಾರ ಬಂದ ಬಳಿಕ ರಾಜ್ಯದಲ್ಲಿ ಶಿವಮೊಗ್ಗ, ಕಲಬುರಗಿ, ಬೀದರ್, ಮೈಸೂರು ಸಹಿತ ನಾಲ್ಕು ಹೊಸ ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. ರೈಲ್ವೆ ವಿದ್ಯುದ್ದೀಕರಣ ಸಹಿತ ರೈಲ್ವೆ ಯೋಜನೆಗಳಿಗೆ 600 ಶೇ.ದಷ್ಟು ಅನುದಾನ ಹೆಚ್ಚಳ ಮಾಡಲಾಗಿದೆ. ಧಾರವಾಡದಲ್ಲಿ ಐಐಟಿ ಸ್ಥಾಪಿಸಲಾಗಿದೆ. ಎಕ್ಸ್‌ಪ್ರೆಸ್ ವೇಗಳನ್ನು ನಿರ್ಮಿಸಲಾಗುತ್ತಿದೆ. ಮೊದಲ ಸೆಮಿಕಂಡಕ್ಟರ್ ಫ್ಯಾಕ್ಟರಿ ಆರಂಭಿಸಲಾಗಿದೆ ಎಂದು ತಿಳಿಸಿದರು.
ಮಂಗಳೂರಿಗೆ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರ ಕೊಡುಗೆ ನೀಡಿದೆ. ಮಂಗಳೂರಿಗೆ ಸ್ಮಾರ್ಟ್ ಸಿಟಿ ಯೋಜನೆ, ಪ್ಲಾಸ್ಟಿಕ್ ಪಾರ್ಕ್, ಬಂದರು ವಿಸ್ತರಣೆ, ವಿಮಾನ ನಿಲ್ದಾಣ ಅಭಿವೃದ್ಧಿ ಸಹಿತ ವಿವಿಧ ಯೋಜನೆಗಳನ್ನು ನೀಡಲಾಗಿದೆ. ಅರ್ಹರನ್ನು ಹುಡುಕಿ ಪದ್ಮ ಪ್ರಶಸ್ತಿ ನೀಡಲಾಗುತ್ತಿದೆ. ಹರೇಕಳ ಹಾಜಬ್ಬ, ಮಹಾಲಿಂಗ ನಾಯ್ಕ್, ತುಳಸಿ ಗೌಡ ಅವರನ್ನು ಪದ್ಮ ಪ್ರಶಸ್ತಿಗೆ ಗುರುತಿಸಿರುವುದು ಮೋದಿ ಸರ್ಕಾರದ ಹೆಗ್ಗಳಿಕೆಯಾಗಿದೆ ಎಂದರು.
ಇನ್ನು ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ ಎಂ., ರಾಜ್ಯ ವಕ್ತಾರ ಕ್ಯಾ. ಗಣೇಶ ಕಾರ್ಣಿಕ್, ಜಿಲ್ಲಾ ವಕ್ತಾರರಾದ ರವಿಶಂಕರ ಮಿಜಾರ್, ಜಗದೀಶ ಶೇಣವ ಉಪಸ್ಥಿತರಿದ್ದರು.
ಇದನ್ನೂ ಓದಿ:ಕರಾವಳಿಯ ಗದ್ದುಗೆಗಾಗಿ ಗುದ್ದಾಟ: ಮಂಗಳೂರು ಉತ್ತರ ಕ್ಷೇತ್ರದ ಟಿಕೆಟ್ಗಾಗಿ ಪ್ರಬಲ ಪೈಪೋಟಿ