ಮಂಗಳೂರು: ಸುಳ್ಯದಲ್ಲಿ ನಿರಂತರವಾಗಿ ಆರು ಬಾರಿ ಗೆಲುವು ಸಾಧಿಸಿದ ಶಾಸಕ ಎಸ್. ಅಂಗಾರ ಅವರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ಸಿಗುವ ತನಕ ಸುಳ್ಯದಲ್ಲಿ ಬಿಜೆಪಿಯ ಎಲ್ಲಾ ಕೆಲಸ ಕಾರ್ಯಗಳನ್ನೂ ಸ್ಥಗಿತಗೊಳಿಸಲಾಗುವುದು ಎಂದು ಬಿಜೆಪಿ ಮಂಡಲ ಸಮಿತಿಯ ಅಧ್ಯಕ್ಷ ವೆಂಕಟ್ ವಳಲಂಬೆ ತಿಳಿಸಿದರು.
ಸುಳ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಮ್ಮ ಅಸಮಾಧಾನ ಹೊರ ಹಾಕಿದ ಅವರು, ಸುಳ್ಯ ವಿಧಾನಸಭಾ ಕ್ಷೇತ್ರದ 75 ಗ್ರಾಮದ 250 ಬೂತ್ಗಳ ಕಾರ್ಯಕರ್ತರು ತಮ್ಮ ಈಗಿನ ಜವಾಬ್ದಾರಿಯಿಂದ ತಕ್ಷಣಕ್ಕೆ ಹೊರಬಂದು ಯಾವುದೇ ಪಕ್ಷದ ಕೆಲಸಗಳನ್ನು ಮಾಡುವುದಿಲ್ಲ. ಶಾಸಕ ಎಸ್.ಅಂಗಾರ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಸುಳ್ಯದಲ್ಲಿ ತೀವ್ರ ಆಕ್ರೋಶ ಭುಗಿಲೆದ್ದಿದೆ. ಪಕ್ಷದ ಪ್ರಮುಖರು ಶಾಸಕ ಅಂಗಾರ ಅವರಿಗೆ ಮುಂದಿನ ಬಾರಿ ಕ್ಯಾಬಿನೆಟ್ನಲ್ಲಿ ಸಚಿವ ಸ್ಥಾನ ನೀಡುವ ಆಶ್ವಾಸನೆ ಕೊಟ್ಟರೆ ಮಾತ್ರ ನಾವು ಮತ್ತೆ ಪಕ್ಷದ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತೇವೆ ಎಂದು ತಮ್ಮ ನಿರ್ಧಾರವನ್ನು ಪ್ರಕಟಿಸಿದರು.
ಸುಳ್ಯ ವಿಧಾನಸಭೆಗೆ ಯಾವ ನ್ಯಾಯ ಸಿಗಬೇಕಿತ್ತೋ, ಅದು ಸಿಗದೆ ನಾವು ಆತಂಕದಲ್ಲಿದ್ದೇವೆ. 1992 ರಿಂದ ಬಿಜೆಪಿ ನಿರಂತರವಾಗಿ ಗೆಲ್ಲಲು ಈ ಭಾಗದ ಜನರ ಆಶೀರ್ವಾದವೇ ಕಾರಣ. ದ.ಕ.ಜಿಲ್ಲೆಯಲ್ಲಿ ಯಾವ ವಿಧಾನಸಭಾ ಕ್ಷೇತ್ರಗಳು ಸೋತರೂ ಸುಳ್ಯ ವಿಧಾನಸಭಾ ಕ್ಷೇತ್ರ ನಿರಂತರವಾಗಿ ಗೆಲುವನ್ನು ಸಾಧಿಸುತ್ತಾ ಬಂದಿದೆ. ಆದರೆ ಈ ಬಾರಿಯ ಯಡಿಯೂರಪ್ಪನವರ ಸರಕಾರದಲ್ಲಿ ನಮ್ಮ ತಾಲೂಕಿನ ಶಾಸಕರಿಗೆ ಸಚಿವ ಸ್ಥಾನ ಸಿಗಬಹುದಿತ್ತು ಎಂದು ಎಲ್ಲರ ಅಪೇಕ್ಷೆಯಾಗಿತ್ತು. ಆದರೆ ಅಂಗಾರರಿಗೆ ಯಾವುದೇ ಸಚಿವ ಸ್ಥಾನ ದೊರಕದಿರುವುದು ನಮಗೆಲ್ಲಾ ಅತೀವ ನೋವು ತಂದಿದೆ ಎಂದು ವೆಂಕಟ್ ವಳಲಂಬೆ ಹೇಳಿದರು.
ನಾವು ಪಕ್ಷ ವಿರೋಧಿ ಕೆಲಸ ಮಾಡುವುದಿಲ್ಲ. ಪಕ್ಷವನ್ನು ಕಟ್ಟಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ನಮ್ಮ ನಿರ್ಧಾರ ಪಕ್ಷದ ಉನ್ನತ ಮಟ್ಟದ ನಾಯಕರಿಗೆ ತಿಳಿಯಬೇಕೆನ್ನುವ ಉದ್ದೇಶದಿಂದ ಇಂದು ಚಳವಳಿಯ ರೀತಿಯ ಕಾರ್ಯವನ್ನು ಮಾಡುತ್ತಿದ್ದೇವೆ ಎಂದು ವೆಂಕಟ್ ವಳಲಂಬೆ ಹೇಳಿದರು.