ಮಂಗಳೂರು: ಕೋಟ್ಯಂತರ ರೂಪಾಯಿ ಮೌಲ್ಯದ ವಕ್ಫ್ ಆಸ್ತಿ ಕಬಳಿಕೆ ಮಾಡಿದ ಬಗ್ಗೆ ತಾವು ತಯಾರಿಸಿದ್ದ ವರದಿಯನ್ನು ಅನುಷ್ಠಾನಗೊಳಿಸದ ಬಿಜೆಪಿ ಸರ್ಕಾರದ ವಿರುದ್ಧ ಬಿಜೆಪಿಯ ರಾಜ್ಯ ಜಂಟಿ ವಕ್ತಾರ ಅನ್ವರ್ ಮಾಣಿಪ್ಪಾಡಿ ಪ್ರತಿಭಟಿಸಿ, ತಮಗೆ ನೀಡಿದ್ದ ಗನ್ಮ್ಯಾನ್ ಭದ್ರತೆ ಬೇಡ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
ಈ ಕುರಿತು ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 2.3 ಲಕ್ಷ ಕೋಟಿಗಳ ವಕ್ಫ್ ಆಸ್ತಿ ಕಬಳಿಕೆ ಪ್ರಕರಣದ ಬಗ್ಗೆ ನಾನು ನೀಡಿದ ವರದಿಗೆ ಸುಪ್ರೀಂಕೋರ್ಟ್ನಲ್ಲಿ ಕೂಡ ಜಯ ಸಿಕ್ಕಿದೆ. ಈ ವರದಿಯನ್ನು ಅನುಷ್ಠಾನಗೊಳಿಸಲು ಹಿಂದಿನ ಕಾಂಗ್ರೆಸ್ ಸರ್ಕಾರ ಆಸಕ್ತಿ ತೋರಲಿಲ್ಲ. ಆದರೆ, ಬಿಜೆಪಿ ಸರ್ಕಾರವೂ ಇದರ ಬಗ್ಗೆ ಆಸಕ್ತಿ ತೋರುತ್ತಿಲ್ಲ ಎಂದು ಆರೋಪಿಸಿದರು.
ಈ ಪ್ರಕರಣವನ್ನು ಮುಚ್ಚಲು ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರು ಕೋಟ್ಯಂತರ ರೂ.ಗಳ ಆಮಿಷವೊಡ್ಡಿದ್ದರು. ಅದನ್ನು ನಾನು ವಿರೋಧಿಸಿ ಮಾಧ್ಯಮಗೋಷ್ಟಿ ನಡೆಸಿದ್ದೆ. ಇದೀಗ ಮುಖ್ಯಮಂತ್ರಿ ಆಗಿರುವ ಬಸವರಾಜ ಬೊಮ್ಮಾಯಿ ಅವರಿಗೂ ವಕ್ಫ್ ಆಸ್ತಿ ಕಬಳಿಕೆ ಪ್ರಕರಣದ ತನ್ನ ವರದಿ ಅನುಷ್ಠಾನಗೊಳಿಸಲು ಹಲವು ಬಾರಿ ತಿಳಿಸಿದ್ದೇನೆ. ಆದರೆ, ಇದರ ಬಗ್ಗೆ ಸ್ಪಂದನೆ ನೀಡದೆ ಇರುವುದರಿಂದ ಬೇಸತ್ತು ನನಗೆ ಸರ್ಕಾರದಿಂದ ನೀಡಿರುವ ಗನ್ ಮ್ಯಾನ್ ಮತ್ತು ಸರ್ಕಾರದ ಸವಲತ್ತುಗಳನ್ನು ಹಿಂದಿರುಗಿಸುತ್ತಿದ್ದೇನೆ ಎಂದು ಘೋಷಿಸಿದರು.
ಪ್ರಧಾನಿ ಮೋದಿಯವರ ಸಬ್ ಕಾ ಸಾತ್, ಸಬ್ ಕಾ ವಿಕಾಸ್ ಉತ್ತಮವಾದ ಪರಿಕಲ್ಪನೆಯಾಗಿದೆ. ಆದರೆ, ಅದನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಬಿಜೆಪಿ ಸರ್ಕಾರ ವಿಫಲವಾಗಿದೆ. ರಾಜ್ಯದ ಜಾತ್ರೆಯಲ್ಲಿ ನಡೆಯುವ ವ್ಯಾಪಾರದಲ್ಲಿ ಹಲಾಲ್ ವಿಚಾರದಲ್ಲಿ ಮುಸ್ಲಿಮರ ಸಂವಿಧಾನಾತ್ಮಕ ಹಕ್ಕುಗಳನ್ನು ಮೊಟಕುಗೊಳಿಸುವ ಯತ್ನ ಮಾಡಲಾಗಿದೆ. ಮಳಲಿ ಮಸೀದಿ ವಿಚಾರದಲ್ಲಿ ವಕ್ಫ್ ಆಸ್ತಿ ಬಗ್ಗೆ ದಾಖಲೆಗಳನ್ನು ಪರಿಶೀಲಿಸಬೇಕಾಗಿದೆ. ಹಿಜಾಬ್ ವಿಚಾರದಲ್ಲಿ ಸುಪ್ರೀಂಕೋರ್ಟ್ ಶೀಘ್ರ ತೀರ್ಪು ನೀಡಬೇಕಿದೆ ಎಂದು ಅವರು ಹೇಳಿದರು.
ಓದಿ: ತಪಾಸಣೆ ನೆಪದಲ್ಲಿ ಅಕ್ರಮವಾಗಿ ಹಣ ಸಂಗ್ರಹಣೆ ಆರೋಪ: ಟ್ರಾಫಿಕ್ ಎಎಸ್ಐ ಸೇರಿ ಇಬ್ಬರು ಸಸ್ಪೆಂಡ್