ಮಂಗಳೂರು: ಜಾತಿ ವ್ಯವಸ್ಥೆಯಲ್ಲಿ ಈ ದೇಶವನ್ನು ಒಡೆದಿರೋದು ಕಾಂಗ್ರೆಸ್ ಅಲ್ಲ ಬಿಜೆಪಿ. ಈ ದೇಶವನ್ನು ವಿಭಜನೆಯತ್ತ ಕೊಂಡೊಯ್ದಿರೋದು ಬಿಜೆಪಿ ಹಾಗೂ ಎಸ್ಡಿಪಿಐ ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ಎಸ್ಡಿಪಿಐ ಈ ದೇಶಕ್ಕೆ ಬಹಳ ಮಾರಕ. ಎಸ್ಡಿಪಿಐ ಹಿಂದೂಗಳ ಮಧ್ಯೆ ಹುಳಿ ಹಿಂಡುವ ಕಾರ್ಯ ಮಾಡುತ್ತಿದೆ. ಪದೇ ಪದೆ ದಲಿತರು ಎಂಬ ಪದ ಬಳಕೆ ಮಾಡಿ ಅವರನ್ನು ಹಿಂದೂಗಳಿಂದ ಪ್ರತ್ಯೇಕ ಮಾಡುವ ಕಾರ್ಯವನ್ನು ಮಾಡುತ್ತಿದ್ದಾರೆ. ಬಿಜೆಪಿ ಕೂಡಾ ಇದನ್ನೇ ಮಾಡುತ್ತಿದೆ. ಹಿಂದುತ್ವದ ಆಧಾರದಲ್ಲಿ ಬಂದಿರುವ ಬಿಜೆಪಿಗರಿಗೆ ಜಾತಿ ವ್ಯವಸ್ಥೆ ಏಕೆ? ಎಂದು ಪ್ರಶ್ನಿಸಿದರು.
ಹಿಂದೂ ಮಹಾವಿಕಾಸ್:ಎಸ್ಡಿಪಿಐ ಹಾಗೂ ಬಿಜೆಪಿ ತಮ್ಮ ಕನಸನ್ನು ಬಿಟ್ಟುಬಿಡಲಿ. ಮುಂದಿನ ದಿನಗಳಲ್ಲಿ ಹಿಂದೂಮಹಾಸಭಾ ಬೆಳೆದೇ ಬೆಳೆಯುತ್ತದೆ. ಗೋಡ್ಸೆ ಅವರ ಹೆಸರಲ್ಲೇ ನಾವು ಅಧಿಕಾರ ಚಲಾಯಿಸುತ್ತೇವೆ. ಅವರ ಹೆಸರಲ್ಲೇ ನಾವು ಪ್ರಮಾಣ ವಚನ ಸ್ವೀಕರಿಸುತ್ತೇವೆ. ಪರ್ಯಾಯ ರಾಜಕೀಯ ಶಕ್ತಿಗೋಸ್ಕರ ಭಾರತ ಎದುರು ನೋಡುತ್ತಿದೆ. ಆದ್ದರಿಂದ ಹಿಂದೂ ಮಹಾಸಭಾ ರಾಜಕೀಯ ಪಕ್ಷವಾಗಿ ಬೆಳೆದೇ ಬೆಳೆಯುತ್ತದೆ. ಹಿಂದೂ ಮಹಾಸಭಾವು ಹಿಂದೂಗಳ ಪರವಾಗಿ 'ಹಿಂದೂ ಮಹಾವಿಕಾಸ್' ಅಭಿಯಾನ ಆರಂಭಿಸಲಿದೆ ಎಂದು ಹೇಳಿದರು.
ವಸತಿ ರಹಿತ ಹಿಂದೂಗಳಿಗೆ ವಸತಿ ಕೊಡುವ ಕಾರ್ಯ, ತಪ್ಪು ಮಾಡದೆ ಜೈಲು ಪಾಲಾಗಿರುವ ಹಿಂದೂ ಯುವಕರನ್ನು ಜೈಲಿನಿಂದ ಬಿಡಿಸಲು ಕಾನೂನಿನ ನೆರವು , ಆರೋಗ್ಯ, ಶಿಕ್ಷಣ ವ್ಯವಸ್ಥೆಗಳನ್ನು ಈ ಮೂಲಕ ಮಾಡಲಾಗುತ್ತದೆ ಎಂದು ಧರ್ಮೇಂದ್ರ ಹೇಳಿದರು.
ಇದನ್ನೂ ಓದಿ: ಪಿಎಫ್ಐ ನಿಷೇಧಿಸುವ ಮೊದಲು RSS, ಭಜರಂಗದಳ ನಿಷೇಧಿಸಿ: ಶಾಸಕ ಜಮೀರ್ ಅಹ್ಮದ್