ಮಂಗಳೂರು: ಸ್ವಯಂ ಕೊರೊನಾ ಸೋಂಕು ತಪಾಸಣೆಗೆ ಹಾಜರಾಗಿದ್ದ ಜಿಲ್ಲೆಯ ಜಪ್ಪಿನಮೊಗರು ಗ್ರಾಮದ ಜೆಪ್ಪುಪಟ್ನದ ಯುವಕನೊಬ್ಬನಲ್ಲಿ ಪಾಸಿಟಿವ್ ವರದಿ ಬಂದಿದ್ದು, ಇದೀಗ ಈತನ ಟ್ರಾವೆಲ್ ಹಿಸ್ಟರಿ ಕಲೆಹಾಕುವುದು ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿದೆ.
ಲಾಕ್ಡೌನ್ಗಿಂತ ಮುಂಚೆಯೇ ಈತ ದೆಹಲಿಯಲ್ಲಿರುವ ತನ್ನ ಫ್ಲ್ಯಾಟ್ನಲ್ಲಿ ಬಂದು ಉಳಿದಿದ್ದ. ಈ ಮಧ್ಯೆ ಊರಿಗೆ ಬರಬೇಕೆಂದು ನಿರ್ಧರಿಸಿ ದೆಹಲಿಯಿಂದ ಕಾಲ್ನಡಿಗೆಯಲ್ಲಿಯೇ ಮಂಗಳೂರಿನತ್ತ ಪ್ರಯಾಣ ಬೆಳೆಸಿದ್ದನು. ಮಾರ್ಗ ಮಧ್ಯೆ ಸಿಕ್ಕ ಸಿಕ್ಕ ಕಾರು, ವ್ಯಾನ್, ಲಾರಿಗಳನ್ನು ಹತ್ತಿ ಮನೆಗೆ ತಲುಪಿದ್ದಾನೆ. ದಾರಿ ಮಧ್ಯೆ ಎಲ್ಲಾ ಚೆಕ್ಪೋಸ್ಟ್ಗಳಲ್ಲಿ ಪೊಲೀಸರು, ಅಧಿಕಾರಿಗಳ ಕಣ್ಣುತಪ್ಪಿಸಿ ತನ್ನ ಜಿಲ್ಲೆಗೆ ಬಂದಿದ್ದಾನೆ.
ಮನೆಗೆ ಬಂದ ತಕ್ಷಣ ಹೆತ್ತವರು ಒಳ ಸೇರಿಸದೇ ತಪಾಸಣೆ ಮಾಡಿಸಿಕೊಳ್ಳುವಂತೆ ಈತನ ಮೇಲೆ ಒತ್ತಡ ಹೇರಿದ್ದರು. ಆದರೆ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಈತ ಅಲ್ಲಿಯೇ ಪಕ್ಕದಲ್ಲಿರುವ ತನ್ನ ಅಜ್ಜಿ ಮನೆಯಲ್ಲಿ ಆಶ್ರಯ ಪಡೆದಿದ್ದನು. ಆ ಬಳಿಕ ಊರು-ಕೇರಿ ಅಂತ ಸಂಬಂಧಿಕರೊಂದಿಗೆ ಬೆರೆತಿದ್ದಾನೆ. ರಿಕ್ಷಾದಲ್ಲೂ ಓಡಾಡಿದ್ದಾನೆ.
ದೆಹಲಿಯಿಂದ ಬಂದು 10 ದಿನಗಳ ಬಳಿಕ ಹೆತ್ತವರ ಒತ್ತಾಯಕ್ಕೆ ಮಣಿದು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ತಪಾಸಣೆಗೆ ಒಳಗಾಗಿದ್ದಾನೆ. ಇದೀಗ ಆತನಿಗೆ ಕೋವಿಡ್ ಸೋಂಕು ತಗುಲಿದೆ ಎಂದು ವರದಿ ಬಂದಿದೆ. ಆದರೆ, ಈಗ ಈತನ ಟ್ರಾವೆಲ್ ಹಿಸ್ಟರಿ ನೋಡಿದ ಅಧಿಕಾರಿಗಳು ದಂಗಾಗಿದ್ದಾರೆ.