ಬೆಳ್ತಂಗಡಿ : ಮುಂಬೈನಿಂದ ಬಂದು ಮರೋಡಿ ಗ್ರಾಮದ ಮೂರು ಶಾಲೆಗಳಲ್ಲಿ ಕ್ವಾರಂಟೈನ್‌ನಲ್ಲಿದ್ದ ಸುಮಾರು 64 ಮಂದಿಗೆ ಶಾಸಕ ಹರೀಶ್ ಪೂಂಜ ಇಂದು ತೆಂಗಿನ ಸಸಿಗಳನ್ನು ವಿತರಿಸಿ, ಬೀಳ್ಕೊಟ್ಟರು.
ಕೂಕ್ರಬೆಟ್ಟು ಸರ್ಕಾರಿ ಶಾಲೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಪೂಂಜ ಅವರು, ಈ ಶಾಲೆಯಲ್ಲಿ ಕ್ವಾರಂಟೈನ್‌ನಲ್ಲಿದ್ದ 25 ಮಂದಿ ಈ ವಿದ್ಯಾ ದೇಗುಲಕ್ಕೆ ಹೊಸ ರೂಪ ತಂದು ಕೊಟ್ಟಿದ್ದಾರೆ. ಕ್ವಾರಂಟೈನ್ ಅವಧಿಯ ದಿನಗಳನ್ನು ವ್ಯರ್ಥ ಮಾಡದೆ ಶಾಲಾ ಪರಿಸರ ಸ್ವಚ್ಛತೆ ಮಾಡಿ ರಾಜ್ಯಕ್ಕೆ ಮಾದರಿಯಾಗಿದ್ದಾರೆ ಎಂದರು. ಇನ್ನೂ ಉದ್ಯೋಗವನ್ನು ಅರಸಿ ಪರವೂರಿಗೆ ಹೋದವರು ಸಂಕಷ್ಟಕ್ಕೆ ಸಿಲುಕಿದಾಗ ಅವರಿಗೆ ಸ್ಪಂದಿಸುವುದು ಆ ಊರಿನವರ ಕರ್ತವ್ಯ. ಈ ನಿಟ್ಟಿನಲ್ಲಿ ಇಲ್ಲಿನ ಗ್ರಾಮಸ್ಥರಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್ ಮಾತನಾಡಿ, 14 ದಿನ ಕೂಕ್ರಬೆಟ್ಟು ಶಾಲೆಯಲ್ಲಿ ಶ್ರಮದಾನದ ಮೂಲಕ ಶಾಲೆಗೆ ವಿಶೇಷ ಮೆರುಗು ನೀಡಿದ್ದಾರೆ. ದಾನಿಗಳ ಸಹಕಾರದಿಂದ ಅವರಿಗೆ ಊಟೋಪಚಾರ ನೀಡಲಾಗಿದೆ. ಇನ್ನೂ ಮರೋಡಿ ಗ್ರಾಮದಲ್ಲಿ ಕ್ವಾರಂಟೈನ್‌ನಲ್ಲಿದ್ದ ಎಲ್ಲರ ಕೋವಿಡ್-19 ವರದಿ ನೆಗೆಟಿವ್ ಬಂದಿವೆ ಎಂದರು.
ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ, ಧಾರ್ಮಿಕ ಪರಿಷತ್ ಸದಸ್ಯ ದೇವೇಂದ್ರ ಹೆಗ್ಡೆ ಕೊಕ್ರಾಡಿ ಮಾತನಾಡಿ, ತುಳುನಾಡಿನ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಮುಂಬೈ ಕನ್ನಡಿಗರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ಈ ವೇಳೆ ಮರೋಡಿ ಶ್ರೀ ಆದಿಶಕ್ತಿ ಸೇವಾ ಸಮಿತಿಯ ಅಧ್ಯಕ್ಷ ರತ್ನಾಕರ ಬುಣ್ಣಾನ್, ಕೂಕ್ರಬೆಟ್ಟು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಜು ಪೂಜಾರಿ, ಮುಖ್ಯಶಿಕ್ಷಕಿ ಸುಫಲಾ, ಮರೋಡಿ ಗ್ರಾಮ ಪಂಚಾಯತ್ ಪಿಡಿಒ ಆಶಾಲತಾ, ಸದಸ್ಯರಾದ ಉಮೇಶ್ ಪೂಜಾರಿ, ಪದ್ಮಶ್ರೀ ಜೈನ್, ಶಿವಾನಂದ ಆಚಾರ್ಯ, ಬಾರ್ಯ ಸಿ ಎ ಬ್ಯಾಂಕ್ ಅಧ್ಯಕ್ಷ ಸುಬ್ರಹ್ಮಣ್ಯ ಗೌಡ ಕೈಕುರೆ, ಸದಾನಂದ ಪೂಜಾರಿ ಉಂಗಿಲಬೈಲು, ಮಾಜಿ ಅಧ್ಯಕ್ಷ ಬಾಲಕೃಷ್ಣ ಬಂಗೇರ, ಮಹೇಶ್ ಪೂಜಾರಿ ಮರೋಡಿ ಉಪಸ್ಥಿತರಿದ್ದರು.