ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಮುಸ್ಲಿಂ ಸಮಾಜವನ್ನು ಗುರಿಯಾಗಿಸಿಕೊಂಡು ದೌರ್ಜನ್ಯ ನಡೆಸಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದ್ದು, ಈ ಕುರಿತು ಸತ್ಯಾಸತ್ಯತೆ ತಿಳಿಯಲು ನ್ಯಾಯಾಧೀಶರ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚಿಸಬೇಕು ಎಂದು ಆಗ್ರಹಿಸಿ ತಾಲೂಕು ಮುಸ್ಲಿಂ ಸಂಘಟನೆಗಳ ಒಕ್ಕೂಟದ ವತಿಯಿಂದ ತಹಶೀಲ್ದಾರ್ ಗೆ ಮನವಿ ಸಲ್ಲಿಸಲಾಯಿತು.
ಜೊತೆಗೆ ಕಳೆದ ವರ್ಷ ರವೂಫ್ ಮುಸ್ಲಿಯಾರ್ ಗೋವಿಂದೂರು ಅವರು ಪಾಕಿಸ್ತಾನಕ್ಕೆ ಸ್ಯಾಟ್ ಲೈಟ್ ಕರೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಮಾಡಲಾಗಿದ್ದು, ಇನ್ನೂ ಈ ಘಟನೆ ದೃಢಪಟ್ಟಿಲ್ಲ. ಈ ಬಗ್ಗೆ ತನಿಖೆ ನಡೆಸಿ ಇಂತಹ ವದಂತಿ ಸೃಷ್ಟಿ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ತಿಳಿಸಿದರು.
ರವೂಫ್ ಮುಸ್ಲಿಯಾರ್ ಅವರು ಧರ್ಮ ಗುರುಗಳಾಗಿದ್ದು, ಮಂಗಳೂರು ತಾಲೂಕಿನ ಮಂಜನಾಡಿ ಎಂಬಲ್ಲಿನ ಶಿಕ್ಷಣ ಸಂಸ್ಥೆಯಲ್ಲಿ ಧಾರ್ಮಿಕ ಸೇವೆ ಸಲ್ಲಿಸುತ್ತಿದ್ದರು. ಈ ಸಂದರ್ಭದಲ್ಲಿ ಅವರ ವಿರುದ್ಧ ರಾಷ್ಟ್ರ ದ್ರೋಹದ ಗಂಭೀರ ಆಪಾದನೆ ಕೇಳಿಬಂತು. ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಅವರ ಕುರಿತು ವರದಿಗಳು ಪ್ರಕಟಗೊಂಡು, ಎಸ್.ಪಿ ಕಚೇರಿಯಿಂದ ತನಿಖೆಗೆ ಹಾಜರಾಗುವಂತೆ ಕರೆ ಬಂದಿತ್ತು. ಯಾರೋ ಕಿಡಿಗೇಡಿಗಳು ಈ ರೀತಿಯಾಗಿ ಉದ್ದೇಶ ಪೂರ್ವಕವಾಗಿಯೇ ಮಾಡುತ್ತಿದ್ದಾರೆ ಎಂದು ಇದೇ ವೇಳೆ ತಿಳಿಸಿದರು.
ಈ ಘಟನೆ ನಡೆದು ಒಂದು ವರ್ಷ ಕಳೆದರೂ ಕೂಡ ಈ ಬಗ್ಗೆ ಯಾವುದೇ ತನಿಖೆ ನಡೆದಿಲ್ಲ. ಆಧಾರವಿಲ್ಲದೆ ಇಂತಹ ಗಂಭೀರ ಆರೋಪವನ್ನು ಮಾಡಿದವರನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳುವಂತೆ ತಾಲೂಕು ಮುಸ್ಲಿಂ ಒಕ್ಕೂಟದ ನಿಯೋಗ ಆಗ್ರಹಿಸಿತು.
ಈ ಸಂದರ್ಭ ತಾಲೂಕು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಬಿ.ಎ ನಝೀರ್, ಮುಸ್ಲಿಂ ಜಮಾಅತ್ ಅಧ್ಯಕ್ಷ ಎಸ್.ಎಂ ಕೋಯ, ಕಾರ್ಯದರ್ಶಿ ಮುಹಮ್ಮದ್ ರಫಿ, ಎಸ್.ಎಮ್.ಎ ರಾಜ್ಯ ಉಪಾಧ್ಯಕ್ಷ ಎ.ಕೆ ಅಹಮದ್, ಕಾರ್ಯದರ್ಶಿ ಸಾದಿಕ್ ಮಲೆಬೆಟ್ಟು, ಪಿ.ಎಫ್.ಐ ಮುಖಂಡ ಹೈದರ್ ನೀರ್ಸಾಲ್, ಸಾಮಾಜಿಕ ಕಾರ್ಯಕರ್ತರಾದ ಅಕ್ಬರ್ ಬೆಳ್ತಂಗಡಿ, ಅಬ್ದುಲ್ ಕರೀಂ ಗೇರುಕಟ್ಟೆ, ಮುಸ್ಲಿಂ ಐಕ್ಯತಾ ವೇದಿಕೆ ಅಧ್ಯಕ್ಷ ಸಲೀಂ ಗುರುವಾಯನಕೆರೆ, ಎಸ್.ಕೆ.ಎಸ್ಸೆಸ್ಸೆಫ್ ವಲಯ ಉಪಾಧ್ಯಕ್ಷ ಅಬ್ದುಲ್ ರಝಾಕ್ ಕನ್ನಡಿಕಟ್ಟೆ ಮೊದಲಾದ ಪ್ರಮುಖರು ಉಪಸ್ಥಿತರಿದ್ದರು.