ಬೆಳ್ತಂಗಡಿ: ಕಾಜೂರಿನಿಂದ ಅಕ್ರಮವಾಗಿ ರಿಕ್ಷಾದಲ್ಲಿ ಗೋ ಮಾಂಸ ಸಾಗಿಸುತ್ತಿದ್ದವರನ್ನು ಸ್ಥಳೀಯ ಹಿಂದೂ ಸಂಘಟನೆಯ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ದಿಡುಪೆ ಸಮೀಪದ ಕುಕ್ಕಾವು ಎಂಬಲ್ಲಿ ನಡೆದಿದೆ.
ಜು. 27ರ ಬೆಳಗ್ಗೆ 10 ಗಂಟೆ ಸುಮಾರಿಗೆ ಕಾಜೂರಿನಿಂದ ಸೋಮಂತಡ್ಕ ಕಡೆಗೆ ವೇಗವಾಗಿ ಆಟೋ ರಿಕ್ಷಾವೊಂದು ಅನುಮಾನಾಸ್ಪದವಾಗಿ ಬರುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯ ಹಿಂದೂ ಕಾರ್ಯಕರ್ತರು ರಿಕ್ಷಾವನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ಈ ವೇಳೆ ಆರೋಪಿಗಳು ಪರಾರಿಯಾಗಲು ಯತ್ನಿಸಿದಾಗ ಕಾರ್ಯಕರ್ತರು ಅಡ್ಡಗಟ್ಟಿ ರಿಕ್ಷಾ ನಿಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ 3 ಗೋಣಿಯಲ್ಲಿ ಗೋ ಮಾಂಸ ಇರುವುದು ಪತ್ತೆಯಾಗಿದೆ. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ವಾಹನ ಹಾಗೂ ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ಕಳೆದ ಕೆಲವು ದಿಗಳಿಂದ ಅಕ್ರಮ ಗೋಸಾಗಾಟ ತಾಲೂಕಿನಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಗೋ ಕಳ್ಳರ ಮೇಲೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.