ಮಂಗಳೂರು(ದಕ್ಷಿಣ ಕನ್ನಡ): ಮುರುಘಾ ಮಠದ ಸ್ವಾಮೀಜಿಯನ್ನು ಬಾಲಕಿಯರ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿರುವ ವಿಚಾರಕ್ಕೆ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈ ಸಂದರ್ಭದಲ್ಲಿ ಮಾತನಾಡುವುದು ಸರಿಯಲ್ಲ ಎಂದರು.
ವಿಮಾನ ನಿಲ್ದಾಣದಲ್ಲಿ ಮಾತನಾಡುತ್ತಾ, ಮುರುಘಾ ಮಠದ ಸ್ವಾಮೀಜಿಗಳ ಬಂಧನ ವಿಳಂಬಕ್ಕೆ ಜನರಿಂದ ಅಸಮಾಧಾನ ವ್ಯಕ್ತವಾಗಿರುವ ವಿಚಾರದಲ್ಲಿ ಪ್ರತಿಕ್ರಿಯಿಸಿ, ಎಲ್ಲಾ ಮಾತುಗಳಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ. ಕಾನೂನು ಪ್ರಕಾರ ಎಲ್ಲಾ ನಡೆಯುತ್ತದೆ. ಈ ಸಂದರ್ಭದಲ್ಲಿ ಮಾತನಾಡುವುದು ಸರಿಯಲ್ಲ. ಪೊಲೀಸರಿಗೆ ಸ್ವಾತಂತ್ರ್ಯ ಕೊಟ್ಟಿದ್ದೇವೆ. ಅವರ ಕೆಲಸ ಮಾಡುತ್ತಿದ್ದಾರೆ. ಯಾವುದೇ ವ್ಯಾಖ್ಯಾನ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಪ್ರಧಾನಿ ಮೋದಿಯವರು ಮಂಗಳೂರಿಗೆ ಇಂದು ಭೇಟಿ ನೀಡಿ 3,800 ಕೋಟಿ ರೂ.ಗಳ ಯೋಜನೆಗಳಿಗೆ ಶಿಲಾನ್ಯಾಸ ಹಾಗೂ ಲೋಕಾರ್ಪಣೆ ನೆರವೇರಿಸಲಿದ್ದಾರೆ. ಕರಾವಳಿಯ ಅಭಿವೃದ್ಧಿಗೆ ಪೂರಕವಾದ ಆರ್ಥಿಕ ಹಾಗೂ ಬಂದರು ಸಾಮರ್ಥ್ಯ ಹೆಚ್ಚು ಮಾಡುವ ಯೋಜನೆಗಳಾಗಿವೆ. ಅಲ್ಲದೆ ವ್ಯವಹಾರ, ಉದ್ಯೋಗವನ್ನು ಹೆಚ್ಚಳಗೊಳಿಸುವ ಯೋಜನೆಗಳಾಗಿವೆ ಎಂದು ಸಿಎಂ ತಿಳಿಸಿದರು.
ಜೊತೆಗೆ, ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಲ್ಲಿ ಆಳಸಮುದ್ರ ಮೀನುಗಾರಿಕೆಯ 100 ಮೀನುಗಾರಿಕಾ ಬೋಟ್ಗಳಿಗೆ ಮಂಜೂರಾತಿ ಮಾಡಲಿದ್ದಾರೆ. ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿಸ್ತರಣೆ ಮಾಡಿ ಫಲಾನುಭವಿಗಳಿಗಳಿಗೆ ಹಸ್ತಾಂತರಿಸಲಿದ್ದಾರೆ. ಈ ಮೂಲಕ ಕರಾವಳಿ ಭಾಗದ ಅಭಿವೃದ್ಧಿಗೆ ಪ್ರಧಾನ ಮೋದಿಯವರು ಅತ್ಯಂತ ದೊಡ್ಡ ಶಕ್ತಿಯನ್ನು ನೀಡಲಿದ್ದಾರೆ ಎಂದು ವಿವರಿಸಿದರು.
ಸೆಪ್ಟೆಂಬರ್ 8 ರಂದು ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಕಾರ್ಯಕ್ರಮಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಆಗಮಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಇದನ್ನೂ ಓದಿ : ಮಂಗಳೂರಿಗಿಂದು ಪ್ರಧಾನಿ ಮೋದಿ: ₹3,800 ಕೋಟಿ ಮೊತ್ತದ 8 ಯೋಜನೆಗಳ ಲೋಕಾರ್ಪಣೆ