ಬಂಟ್ವಾಳ: ಕೂಲಿ ಕಾರ್ಮಿಕನೊಬ್ಬ ಪವಿತ್ರ ಹಜ್ ಯಾತ್ರೆಗಾಗಿ ಹಲವಾರು ವರ್ಷಗಳಿಂದ ಕೂಡಿಟ್ಟ ಹಣವನ್ನು ಹಸಿದ ಹೊಟ್ಟೆ ತುಂಬಿಸುವುದಕ್ಕಾಗಿ ಮೀಸಲಿಟ್ಟು ಮಾನವೀಯತೆ ಮೆರೆದಿದ್ದಾರೆ.
ಕೊರೊನಾ ತಂದ ಈ ಕರಾಳ ದಿನಗಳಲ್ಲಿ ಅದೆಷ್ಟೋ ಮಂದಿ ಸಂಕಷ್ಟಕ್ಕೀಡಾಗಿದ್ದು, ಒಂದಿಷ್ಟು ಮಂದಿ ಅವರ ನೆರವಿಗೆ ಮುಂದಾಗುತ್ತಿದ್ದಾರೆ. ಅದರಲ್ಲಿ ಒಬ್ಬರಾದ ಅಬ್ದುಲ್ ರಹಮಾನ್ ಎಂಬ ಕೂಲಿಕಾರ್ಮಿಕ ಮೂಲತಃ ಬಿ.ಸಿ.ರೋಡ್ನ ಗೂಡಿನಬಳಿ ನಿವಾಸಿ. ಪತ್ನಿ ಬೀಡಿ ಕಟ್ಟಿ ತಾನು ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು.
ಪವಿತ್ರ ಮೆಕ್ಕಾ, ಮದೀನ ಯಾತ್ರೆ ಕೈಗೊಳ್ಳುವ ಉದ್ದೇಶದಿಂದ ಹಲವು ವರ್ಷಗಳಿಂದ ಹಣವನ್ನು ಕೂಡಿಡುತ್ತಾ ಬಂದಿದ್ದು, ಇದೀಗ ಬಡವರ ಸಂಕಷ್ಟಕ್ಕೆ ಈ ದಂಪತಿ ಮರುಗಿದ್ದಾರೆ. ಹೀಗಾಗಿ ಹಜ್ ಯಾತ್ರೆಗೆ ಕೂಡಿಟ್ಟ ಹಣದಿಂದ ಅಕ್ಕಿ ಸಹಿತ ಆಹಾರ ಸಾಮಗ್ರಿಗಳನ್ನು ಖರೀದಿಸಿ, ಸಂಕಷ್ಟದಲ್ಲಿರುವವರಿಗೆ ವಿತರಿಸಲು ಮುಂದಾಗಿದ್ದಾರೆ. ಬಡ/ಅಶಕ್ತ ಕುಟುಂಬಕ್ಕೆ ಹಜ್ ಹಣದಿಂದ ದಿನಸಿ ಸಾಮಾಗ್ರಿ ವಿತರಿಸುವ ವಿಚಾರವನ್ನು ಅವರ ಪುತ್ರ ಇಲ್ಯಾಸ್ ಗೂಡಿನಬಳಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡದ್ದು ಇದೀಗ ವೈರಲ್ ಆಗುತ್ತಿದೆ.