ಬಂಟ್ವಾಳ: ಬಂಟ್ವಾಳದ ಮಹಿಳೆ ಕೊರೊನಾದಿಂದ ಸಾವನ್ನಪ್ಪಿರುವ ಪ್ರಕರಣದ ಹಿನ್ನೆಲೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ರಾಜೇಶ ನಾಯ್ಕ್ ಅಧ್ಯಕ್ಷತೆಯಲ್ಲಿ ಇಂದು ಬೆಳಗ್ಗೆ ಅಧಿಕಾರಿಗಳ ಮಟ್ಟದ ತುರ್ತು ಸಭೆ ನಡೆಸಲಾಯಿತು. ಮಹಿಳೆ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಅವರ ಟ್ರಾವೆಲ್ ಹಿಸ್ಟರಿ ಮತ್ತು ಕೊರೊನಾ ಪಾಸಿಟಿವ್ ಬರಲು ಕಾರಣವಾದ ಅಂಶಗಳನ್ನು ಪತ್ತೆ ಹಚ್ಚುವ ಕುರಿತು ಸಮಾಲೋಚನೆ ನಡೆಯಿತು.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತು ಇನ್ನೂ ಮಾಹಿತಿ ಲಭ್ಯವಾಗಿಲ್ಲ. ತನಿಖೆ ಬಳಿಕವಷ್ಟೇ ಟ್ರಾವೆಲ್ ಹಿಸ್ಟರಿ ಮತ್ತು ಕೋವಿಡ್-19 ಹೇಗೆ ಬಂತು ಎಂಬುದನ್ನು ಪತ್ತೆ ಹಚ್ಚಲು ಸಾಧ್ಯ ಎಂದರು. ಬಂಟ್ವಾಳದಲ್ಲಿ ಮಹಿಳೆ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಜನರು ಜಾಗರೂಕರಾಗಬೇಕಾಗಿದೆ. ಹಲವು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಈಗಾಗಲೇ 34 ಮಂದಿಯನ್ನು ಕ್ವಾರಂಟೈನ್ನಲ್ಲಿರಿಸಲಾಗಿದೆ. ಅವರಲ್ಲಿ 6 ಮಂದಿ ವೈದ್ಯ ಸಿಬ್ಬಂದಿಯೂ ಇದ್ದಾರೆ ಎಂದರು.
ಸಭೆಯಲ್ಲಿ ಶಾಸಕ ರಾಜೇಶ ನಾಯ್ಕ್, ಆರೋಗ್ಯ ಸರ್ವೇಕ್ಷಣಾಧಿಕಾರಿ ಡಾ. ರಾಜೇಶ, ತಹಶೀಲ್ದಾರ್ ರಶ್ಮಿ, ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು, ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಮತ್ತಿತರರು ಉಪಸ್ಥಿತರಿದ್ದರು.