ಬಂಟ್ವಾಳ(ದಕ್ಷಿಣಕನ್ನಡ): ಕಳೆದ ಸಾಲಿನ ಬಂಟ್ವಾಳ ತಾಲೂಕು ಪಂಚಾಯಿತಿಯ ಸುಮಾರು 90 ಲಕ್ಷ ರೂಪಾಯಿ ಅನುದಾನ ಮಂಜೂರಾಗದೆ ವಾಪಸ್ ಹೋದ ವಿಚಾರ ಬುಧವಾರ ನಡೆದ ಬಂಟ್ವಾಳ ತಾಲೂಕು ಪಂಚಾಯಿತಿ ಸಭೆಯಲ್ಲಿ ಚರ್ಚೆಗೆ ಕಾರಣವಾಯಿತು.
15ನೇ ಹಣಕಾಸು ಯೋಜನೆಯ ಕ್ರಿಯಾ ಯೋಜನೆ ತಯಾರಿ ಕುರಿತು ತಾ.ಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಹಿರಿಯ ಸದಸ್ಯ ಉಸ್ಮಾನ್ ಕರೋಪಾಡಿ, ಕಳೆದ ವರ್ಷದ ಕಾಮಗಾರಿಗೆ ಹಣ ಪಾವತಿಯಾಗಿಲ್ಲ ಎಂದರು. ಇದಕ್ಕೆ ದನಿಗೂಡಿಸಿದ ಸದಸ್ಯರಾದ ಸಂಜೀವ ಪೂಜಾರಿ, ಹೈದರ್ ಕೈರಂಗಳ, ಕೊಟ್ಟ ಕ್ರಿಯಾ ಯೋಜನೆಯ ಅನುದಾನ ಲ್ಯಾಪ್ಸ್ ಆಗಲು ಕಾರಣವೇನು ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ತಾ.ಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ತಾಲೂಕು ಖಜಾನೆಯಲ್ಲಿ ನಿರ್ದಿಷ್ಟ ದಿನದೊಳಗೆ ಬಂದ ಹಣ ವಾಪಸ್ ಹೋಗಿದೆ. ಅಧಿಕಾರಿಗಳಿಂದ ಎಷ್ಟಿಮೇಟ್ ಸಕಾಲಕ್ಕೆ ಬಾರದೆ ಸಮಸ್ಯೆ ಉಂಟಾಗಿದೆ. ಕೆಲವು ಬಿಲ್ಗಳು ಪಾಸ್ ಆಗಿದ್ದರೂ ಇನ್ನೂ ಕೆಲವು ಪಾಸ್ ಆಗಿಲ್ಲ ಎಂದರು. ಈ ವೇಳೆ ಖಜಾನೆ ಸಿಬ್ಬಂದಿ ಮೇಲೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ತಾ.ಪಂ ಸದಸ್ಯ ಪ್ರಭಾಕರ ಪ್ರಭು ಮಾತನಾಡಿ, ಬಂಟ್ವಾಳ ತಾಲೂಕಿನಲ್ಲಿ ಮಾತ್ರ ಈ ರೀತಿ ಯಾಕೆ ಸಮಸ್ಯೆಯಾಗುತ್ತದೆ. ಪುತ್ತೂರು ತಾಲೂಕು ಪಂಚಾಯತ್ನಲ್ಲಿ ಪೂರ್ಣ ಅನುದಾನ ವ್ಯಯವಾಗಿದೆ. ನಮ್ಮಲ್ಲಿ ಯಾಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು. ಈ ವೇಳೆ ಉಪಾಧ್ಯಕ್ಷ ಅಬ್ಬಾಸ್ ಆಲಿ ಮಾತನಾಡಿ, ಮಾ. 12ಕ್ಕೆ ಕೊಟ್ಟ ಬಿಲ್ ಆಗಿಲ್ಲ. ಮಾ. 23ಕ್ಕೆ ಕೊಟ್ಟ ಬಿಲ್ ಆಗಿದೆ. ಇದು ಹೇಗೆ ಸಾಧ್ಯ ಎಂಬುದನ್ನ ಖಜಾನಾಧಿಕಾರಿ ಸಭೆಗೆ ಬಂದು ಉತ್ತರ ನೀಡಲಿ ಎಂದರು.
ಬಳಿಕ ಮಾತನಾಡಿದ ಖಜಾನಾಧಿಕಾರಿ, ತಾನು ಸರ್ಕಾರದ ಆದೇಶದ ಪ್ರಕಾರವೇ ಕರ್ತವ್ಯ ನಿರ್ವಹಿಸಿದ್ದೇನೆ. ಮಾ. 18ರವರೆಗೆ ಕೊನೆಯ ದಿನಾಂಕವಿದ್ದರೂ ಮಾ. 21ರವರೆಗೂ ಬಿಲ್ ಪಾಸ್ ಮಾಡಿದ್ದೇನೆ. ಆದರೆ ಮಾ. 23ಕ್ಕೆ ಕಮಿಷನರ್ ಅವರಿಂದ ಸೂಚನೆ ಬಂದ ಬಳಿಕ ನಿಲ್ಲಿಸಿದ್ದೇವೆ ಎಂದರು.