ಬಂಟ್ವಾಳ(ದ.ಕ): ದೂರವಾಣಿ ಕರೆಯೊಂದಕ್ಕೆ ಸ್ಪಂದಿಸಿದ ತಹಸೀಲ್ದಾರ್ ರಶ್ಮಿ ಎಸ್.ಆರ್ ತಾಲೂಕಿನ ಸಾಲೆತ್ತೂರಿನಲ್ಲಿ ಸಂಕಷ್ಟಕ್ಕೆ ಸಿಲುಕಿದ ನಿರಾಶ್ರಿತರ ಕುಟುಂಬಗಳಿಗೆ ಅಗತ್ಯ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಂಡರು.
ತಾಲೂಕಿನ ಸಾಲೆತ್ತೂರು ಗ್ರಾಮದಲ್ಲಿ ಕಿಂಡಿ ಅಣೆಕಟ್ಟಿಗೆ ತಡೆಗೋಡೆ ನಿರ್ಮಿಸಲು ಗದಗ ಜಿಲ್ಲೆಯಿಂದ ಬಂದಿರುವ ಕೂಲಿಕಾರ್ಮಿಕರು ಕೊರೊನಾ ಹಿನ್ನೆಲೆ ಲಾಕ್ಡೌನ್ನಿಂದಾಗಿ ನಿರಾಶ್ರಿತರಾಗಿದ್ದು, ಈ ಕುರಿತು ದೂರವಾಣಿ ಮೂಲಕ ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್. ಅವರಿಗೆ ಮಾಹಿತಿಯನ್ನು ಮಂಗಳವಾರ ಬೆಳಗ್ಗೆ ನೀಡಲಾಗಿತ್ತು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಅವರು, ಎಂಟು ಕುಟುಂಬಗಳ 19 ಜನರಿಗೆ, ಸಾಲೆತ್ತೂರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಆಶ್ರಯ ಕಲ್ಪಿಸಿದರು. ನಿರಾಶ್ರಿತರ ಅಹವಾಲು ಆಲಿಸಿ, ಅಗತ್ಯ ವ್ಯವಸ್ಥೆ ಬಗ್ಗೆ ಕ್ರಮಕೈಗೊಂಡರು.
ಈ ಸಂದರ್ಭ ಸಂಕಷ್ಟ ಅನುಭವಿಸುತ್ತಿದ್ದ ಕೊರಗ ಕುಟುಂಬದವರಿಗೂ ಸೂಕ್ತ ವ್ಯವಸ್ಥೆ ಕಲ್ಪಿಸಲು ಅವರು ಸೂಚಿಸಿದರು. ಈ ಸಂದರ್ಭ ವಿಟ್ಲ ಕಂದಾಯ ನಿರೀಕ್ಷಕರಾದ ದಿವಾಕರ ಮುಗುಳಿಯ, ಸಾಲೆತ್ತೂರು ಗ್ರಾ.ಪಂ.ಕಾರ್ಯದರ್ಶಿ, ಸಾಲೆತ್ತೂರು ಗ್ರಾಮ ಲೆಕ್ಕಾಧಿಕಾರಿ ಅನಿಲ್,ಗ್ರಾಮ ಸಹಾಯಕ ಮಹಾಬಲ ಹಾಗೂ ಗ್ರಾ.ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.
.