ಬಂಟ್ವಾಳ(ದಕ್ಷಿಣ ಕನ್ನಡ): ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರು ಶೀಘ್ರ ಗುಣಮುಖರಾಗಬೇಕು. ಅವರ ಆರೋಗ್ಯ ವೃದ್ಧಿಯಾಗಬೇಕು ಹಾಗೂ ಅವರ ಕುಟುಂಬವೂ ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳುವಂತೆ ಬಿ.ಸಿ. ರೋಡಿನ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯಲ್ಲಿ ಇಂಟಕ್ ಕಾರ್ಯಕರ್ತರು ಜಿಲ್ಲಾ ಇಂಟಕ್ ಪ್ರಧಾನ ಕಾರ್ಯದರ್ಶಿ ಬೊಂಡಾಲ ಚಿತ್ತರಂಜನ್ ಶೆಟ್ಟಿ ನೇತೃತ್ವದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಪೂಜಾರಿ ಕುಟುಂಬದ ಪರವಾಗಿ ಹೂವಿನ ಪೂಜೆ ಮಾಡಲಾಯಿತು. ಬಂಟ್ವಾಳ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಪ್ರದಾನ ಕಾರ್ಯದರ್ಶಿ ಸುರೇಶ್ ಪೂಜಾರಿ ಜೋರ, ಸೋಮನಾಥ್ ಚಂಡ್ತಿಮರ್, ಗಣೇಶ್ ನಾಯ್ಕ್, ಸಂತೋಷ್ ಕುಮಾರ್, ಲೋಕೇಶ್ ಸುವರ್ಣ, ರಂಜಿತ್ ಪೂಜಾರಿ ನಂದರಬೆಟ್ಟು ಇದ್ದರು.
ಹಾಗೇ ಜನಾರ್ದನ ಪೂಜಾರಿ ಶೀಘ್ರ ಗುಣಮುಖರಾಗಲಿ ಎಂದು ಕಾಂಗ್ರೆಸ್ ನಾಯಕರು ಹಾರೈಸಿದ್ದಾರೆ. ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸೇರಿದಂತೆ ಹಲವು ನಾಯಕರು ಜನಾರ್ದನ ಪೂಜಾರಿ ಚೇತರಿಕೆಗೆ ಹಾರೈಸಿದ್ದಾರೆ. ಸಿದ್ದರಾಮಯ್ಯ ತಮ್ಮ ಟ್ವೀಟ್ನಲ್ಲಿ, ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಬಿ.ಜನಾರ್ದನ ಪೂಜಾರಿ ಅವರಿಗೆ ಕೊರೊನಾ ಸೋಂಕು ತಗಲಿರುವ ಸುದ್ದಿ ತಿಳಿದು ಬೇಸರವಾಯಿತು. ಪೂಜಾರಿ ಅವರು ಶೀಘ್ರ ಗುಣಮುಖರಾಗಲೆಂದು ಹಾರೈಸುತ್ತೇನೆ ಎಂದಿದ್ದಾರೆ.
![tweet](https://etvbharatimages.akamaized.net/etvbharat/prod-images/kn-bng-03-siddu-khandre-tweet-script-7208077_06072020154917_0607f_1594030757_422.jpg)
ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ತಮ್ಮ ಟ್ವೀಟ್ನಲ್ಲಿ, ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರಿಗೆ ಕೋವಿಡ್ ಸೋಂಕು ತಗುಲಿರುವ ವಿಚಾರ ಕೇಳಿ ನೋವಾಗಿದೆ. ಹುಟ್ಟು ಹೋರಾಟಗಾರರಾದ ಪೂಜಾರಿ ಕೋವಿಡ್ ವಿರುದ್ಧದ ಹೋರಾಟದಲ್ಲಿ ಗೆದ್ದು ಮತ್ತೆ ಎಂದಿನಂತೆ ಮಾರ್ಗದರ್ಶನ ನೀಡಲಿ ಎಂದು ದೇವರನ್ನ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
![tweet](https://etvbharatimages.akamaized.net/etvbharat/prod-images/kn-bng-03-siddu-khandre-tweet-script-7208077_06072020154917_0607f_1594030757_296.jpg)