ಮಂಗಳೂರು: ಕರ್ನಾಟಕ ರಾಜ್ಯ ವಿಧಾನಸಭೆಗೆ ಚುನಾವಣೆ ಇನ್ನು ಕೆಲವೇ ದಿನಗಳಲ್ಲಿ ಘೋಷಣೆಯಾಗಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಸಾಕಷ್ಟು ಕುತೂಹಲ ಕೆರಳಿಸುವ ಕ್ಷೇತ್ರಗಳಲ್ಲಿ ಪ್ರಮುಖವಾದದ್ದು ಬಂಟ್ವಾಳ. ಕಾಂಗ್ರೆಸ್ ಮಾಜಿ ಸಚಿವ, ಬಿಜೆಪಿಯ ಪ್ರಬಲ ಎದುರಾಳಿ ಬಿ. ರಮಾನಾಥ ರೈ ಕಾರಣಕ್ಕೆ ಈ ಕ್ಷೇತ್ರ ಸಾಕಷ್ಟು ಕುತೂಹಲ ಕೆರಳಿಸಿದೆ.
ಕಳೆದ ಬಾರಿ ರಮಾನಾಥ ರೈ ಸೋಲನ್ನಪ್ಪಿದ್ದರು. ಬಿಜೆಪಿಯಿಂದ ರಾಜೇಶ್ ನಾಯ್ಕ್ ಗೆದ್ದು ಶಾಸಕರಾಗಿದ್ದರು. ಈ ಬಾರಿ ಇದೇ ಕ್ಷೇತ್ರದಲ್ಲಿ ರಮಾನಾಥ ರೈ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ಬಿಜೆಪಿಯಿಂದಲೂ ರಾಜೇಶ್ ನಾಯ್ಕ್ ಚುನಾವಣಾ ಸಿದ್ದತೆ ನಡೆಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಈ ಎರಡು ಪಕ್ಷಗಳಿಂದ ಪಕ್ಷದ ಅಭ್ಯರ್ಥಿ ಘೋಷಣೆಯಾಗದಿದ್ದರೂ ಇವರೆ ಅಭ್ಯರ್ಥಿಗಳಾಗುವ ಸಾಧ್ಯತೆಯೇ ಹೆಚ್ಚು. ಈ ಕಾರಣದಿಂದ ಕ್ಷೇತ್ರ ಕುತೂಹಲದ ಕೇಂದ್ರಬಿಂದುವಾಗಿದೆ.
ಕಾಂಗ್ರೆಸ್ ಪಕ್ಷದಲ್ಲಿ ರಮಾನಾಥ ರೈ ಪ್ರಬಲ ನಾಯಕ. ರೈ ಸಚಿವರಾಗಿದ್ದಾಗ ಅವರನ್ನು ಸೋಲಿಸುವ ನಿಟ್ಟಿನಲ್ಲಿ ಸಾಕಷ್ಟು ತಂತ್ರಗಾರಿಕೆಯನ್ನು ಬಿಜೆಪಿ ಮಾಡಿತ್ತು. ಕಾಂಗ್ರೆಸ್ ಪಕ್ಷದ ನಿಷ್ಟಾವಂತನಾಗಿದ್ದ ರೈ, ಬಿಜೆಪಿಯ ವಿರುದ್ಧ ಅವಕಾಶ ಸಿಕ್ಕಿದಾಗೆಲ್ಲ ದಾಳಿ ಮಾಡುತ್ತಿದ್ದರು. ಈ ಕಾರಣದಿಂದ ರೈ ಅವರ ಸೋಲು ಬಿಜೆಪಿಗೆ ಪ್ರಮುಖವಾಗಿತ್ತು. ಕಳೆದ ಬಾರಿ ಬಿಜೆಪಿ ಅದರಲ್ಲಿ ಯಶಸ್ವಿ ಆಗಿತ್ತು. ಈ ಬಾರಿಯೂ ಮತ್ತೆ ಕಾಂಗ್ರೆಸ್ನಿಂದ ಅವರು ಸ್ಪರ್ಧಿಸುವ ನಿರೀಕ್ಷೆ ಇದ್ದುದರಿಂದ ಕ್ಷೇತ್ರ ಕುತೂಹಲ ಮೂಡಿಸಿದೆ.
ಬಂಟ್ವಾಳ ವಿಧಾನಸಭಾ ಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ ರಾಜಕೀಯದ ಪವರ್ ಸೆಂಟರ್. ಇಲ್ಲಿ ಸಾಕಷ್ಟು ರಾಜಕಾರಣಿಗಳು ಅದೃಷ್ಟ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಕೆಲವರು ಸ್ಪರ್ಧಿಸಿ ಸೋತು ಅನ್ಯಕ್ಷೇತ್ರದಲ್ಲಿ ಗೆದ್ದವರೂ ಇದ್ದಾರೆ. 1952 ರಿಂದ 1962ರ ವರೆಗೆ ಈ ಕ್ಷೇತ್ರ ಪಾಣೆಮಂಗಳೂರು ಕ್ಷೇತ್ರವೆನಿಸಿಕೊಂಡಿತ್ತು. 1967ರ ಬಳಿಕ ಬಂಟ್ವಾಳ ಎಂಬ ಹೆಸರನ್ನು ಪಡೆಯಿತು. ಆ ವರ್ಷ ರಾಜ್ಯ ವಿಧಾನಸಭೆ ಪ್ರವೇಶಿಸಿದ ಮೊದಲ ಮಹಿಳೆಯರ ಸಾಲಿಗೆ ಅಂದಿನ ಕಾಂಗ್ರೆಸ್ ಶಾಸಕಿ ಲೀಲಾವತಿ ರೈ ಬಂಟ್ವಾಳದಿಂದ ಆಯ್ಕೆಯಾಗಿದ್ದರು. ರಾಜ್ಯದ ಮೊದಲ ಸ್ಪೀಕರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ವೈಕುಂಠ ಬಾಳಿಗಾ, ಸಚಿವರಾಗಿ ಜನಪ್ರಿಯರಾಗಿದ್ದ ನಾಗಪ್ಪ ಆಳ್ವ ಪಾಣೆಮಂಗಳೂರು ಕ್ಷೇತ್ರದಲ್ಲೂ ಗೆದ್ದದ್ದು ಈಗ ಇತಿಹಾಸ. 1952 ರಿಂದೀಚೆಗೆ ವೈಕುಂಠ ಬಾಳಿಗಾ, ಬಿ.ವಿ.ಕಕ್ಕಿಲ್ಲಾಯ, ಬಿ.ಎ.ಮೊಯ್ದೀನ್, ಶಿವರಾವ್ ಹೊರತುಪಡಿಸಿದರೆ, ಮತ್ತೆಲ್ಲ ಒಂದೇ ಸಮುದಾಯದ ಅಭ್ಯರ್ಥಿಗಳೇ ವಿಜಯಿಯಾದದ್ದು ಇತಿಹಾಸ. 1985ರಿಂದೀಚೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಬಂಟ ಸಮುದಾಯದ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿದ್ದು ಕ್ಷೇತ್ರದ ಮತ್ತೊಂದು ವಿಶೇಷತೆ.
ಈಗಿನ ಕಾಂಗ್ರೆಸ್ ನಾಯಕಿಯಾಗಿರುವ ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಬಂಟ್ವಾಳದಲ್ಲಿ ರಮಾನಾಥ ರೈ ವಿರುದ್ಧ ಎರಡು ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಆ ನಂತರ 2004ರಲ್ಲಿ ಬಿಜೆಪಿಯ ನಾಗರಾಜ ಶೆಟ್ಟರು 54860 ಮತ ಗಳಿಸಿ ರಮಾನಾಥ ರೈ ಅವರನ್ನು (48934) ಸೋಲಿಸಿ ಮಂತ್ರಿಯಾದರು. 2008ರಲ್ಲಿ ರಮಾನಾಥ ರೈ 61560 ಮತವನ್ನು ಗಳಿಸಿ ನಾಗರಾಜ ಶೆಟ್ಟರನ್ನು (60309) ಮಣಿಸಿ, ಮುಯ್ಯಿ ತೀರಿಸಿಕೊಂಡಿದ್ದರು. ಇದೇ ಚುನಾವಣೆಯಲ್ಲಿ ವಿಟ್ಲದಲ್ಲಿ 1999ರಲ್ಲಿ ಕಾಂಗ್ರೆಸ್ ಶಾಸಕರಾಗಿದ್ದ ಕೆ.ಎಂ.ಇಬ್ರಾಹಿಂ ಜೆಡಿಎಸ್ನಿಂದ ಸ್ಪರ್ಧಿಸಿ, 6298 ಮತ ಗಳಿಸಿದ್ದು ವಿಶೇಷ. 2013ರಲ್ಲಿ ರಮಾನಾಥ ರೈ ಬಿಜೆಪಿಯ ರಾಜೇಶ್ ನಾಯ್ಕ್ ವಿರುದ್ಧ ಗೆದ್ದರು. 2018ರಲ್ಲಿ ರಾಜೇಶ್ ನಾಯ್ಕ್ ಅವರು ರೈ ಅವರನ್ನು ಸೋಲಿಸಿದರು.
1967ರಲ್ಲಿ ಕ್ಷೇತ್ರ ಅಸ್ತಿತ್ವಕ್ಕೆ ಬಂದ ಬಳಿಕ ನಡೆದ 12 ಚುನಾವಣೆಗಳಲ್ಲಿ 8 ಬಾರಿ ಕಾಂಗ್ರೆಸ್, 1 ಬಾರಿ ಸಿಪಿಐ, 3 ಬಾರಿ ಬಿಜೆಪಿ ಗೆದ್ದಿದೆ. ಕಾಂಗ್ರೆಸ್ನಿಂದ ಲೀಲಾವತಿ ರೈ ಹಾಗೂ ಬಿ.ಎ.ಮೊಯ್ದೀನ್ ತಲಾ ಒಂದು ಬಾರಿ ಗೆದ್ದರೆ, ರಮಾನಾಥ ರೈ 6 ಬಾರಿ ವಿಜಯಿಯಾದವರು. ಬಿಜೆಪಿಯಿಂದ ಶಿವರಾವ್, ನಾಗರಾಜ ಶೆಟ್ಟಿ ಮತ್ತು ರಾಜೇಶ್ ನಾಯ್ಕ್ ತಲಾ ಒಂದು ಬಾರಿ ಗೆದ್ದಿದ್ದಾರೆ. ಇವರಲ್ಲಿ ರಮಾನಾಥ ರೈ ಮತ್ತು ನಾಗರಾಜ ಶೆಟ್ಟಿ ಮಂತ್ರಿಯಾದವರು.
ಬಂಟ್ವಾಳ ಕ್ಷೇತ್ರ ಕಾಂಗ್ರೆಸ್ ಭದ್ರನೆಲೆ ಎಂಬ ಸಂದರ್ಭದಲ್ಲಿ ರಾಜಕೀಯ ಹೊಂದಾಣಿಕೆಯಲ್ಲಿ ಸಿಪಿಐನ ಬಿ.ವಿ.ಕಕ್ಕಿಲ್ಲಾಯ ಅವರಿಗೆ 1972ರಲ್ಲಿ ಟಿಕೆಟ್ ಸಿಕ್ಕಿತ್ತು. ಆಗ ಕಾಂಗ್ರೆಸ್ ಬೆಂಬಲದಿಂದ ಅವರು ಜನಸಂಘದಿಂದ ಮೊದಲ ಬಾರಿ ಕಣಕ್ಕಿಳಿದಿದ್ದ ರುಕ್ಮಯ ಪೂಜಾರಿ ಅವರನ್ನು ಸೋಲಿಸಿದರು. ಬಳಿಕ ನಡೆದ ಚುನಾವಣೆಗಳಲ್ಲಿ ಎಡಪಕ್ಷಗಳು ಗೆಲ್ಲಲು ಸಾಧ್ಯವಾಗಿಲ್ಲ.
1983ರ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಅಲೆಗೆ ಕಾಂಗ್ರೆಸ್ ಹೊಡೆತ ತಿಂದ ಸಂದರ್ಭ ಬಂಟ್ವಾಳದಲ್ಲೂ ಶಿವರಾವ್ ಅವರು ಗೆಲ್ಲುವ ಮೂಲಕ ಬಿಜೆಪಿ ಮೊದಲ ಬಾರಿ ಖಾತೆಯನ್ನು ತೆರೆದಿತ್ತು. ಬಳಿಕ ರಮಾನಾಥ ರೈ ಶಿವರಾವ್ ಅವರನ್ನು 1985ರಲ್ಲಿ ಸೋಲಿಸಿದರು. 2004ರಲ್ಲಿ ಬಿಜೆಪಿಯ ನಾಗರಾಜ ಶೆಟ್ಟಿ ಅವರು ರೈ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದರೆ, 2018ರಲ್ಲಿ ರಾಜೇಶ್ ನಾಯ್ಕ್ ಬಿಜೆಪಿಯಿಂದ ಎರಡನೇ ಬಾರಿ ಸ್ಪರ್ಧಿಸಿ ರಮಾನಾಥ ರೈ ವಿರುದ್ಧ ಗೆದ್ದರು.
ಪಾಣೆಮಂಗಳೂರು ಕ್ಷೇತ್ರ ಪ್ರತಿನಿಧಿಸಿದ್ದ ನಾಗಪ್ಪ ಆಳ್ವ ರಾಜ್ಯದಲ್ಲಿ ಮಂತ್ರಿಯಾದರೆ, ಬಳಿಕ ಬಂಟ್ವಾಳ ಕ್ಷೇತ್ರದಿಂದ ಗೆದ್ದ ರಮಾನಾಥ ರೈ ಸುದೀರ್ಘ ಕಾಲ ಮಂತ್ರಿಯಾದರು. ರಮಾನಾಥ ರೈ ಅವರನ್ನು ಸೋಲಿಸಿ ಗಮನ ಸೆಳೆದ ನಾಗರಾಜ ಶೆಟ್ಟಿ ಮೊದಲ ಗೆಲುವಲ್ಲೇ ಮಂತ್ರಿಯಾದವರು. ಹಾಗೆಯೇ ಬಿ.ಎ.ಮೊಯ್ದೀನ್ ಬಂಟ್ವಾಳದಲ್ಲಿ ಗೆದ್ದಾಗ ಮಂತ್ರಿ ಆಗದಿದ್ದರೂ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜೆ.ಎಚ್.ಪಟೇಲ್ ಸಂಪುಟದಲ್ಲಿ ಇಪ್ಪತ್ತು ವರ್ಷಗಳ ಬಳಿಕ ಸಚಿವರಾದರು.
ಬಂಟ್ವಾಳದಲ್ಲಿ ಚುನಾವಣೆಗೆ ಸ್ಪರ್ಧಿಸಿ ಸೋಲು ಕಂಡವರು ಬೇರೆ ಕ್ಷೇತ್ರದಲ್ಲಿ ವಿಜಯಿಯಾದವರೂ ಇದ್ದಾರೆ. ರಮಾನಾಥ ರೈ ವಿರುದ್ಧ ಬಿಜೆಪಿಯಲ್ಲಿ ಎರಡು ಬಾರಿ ಸ್ಪರ್ಧಿಸಿ ಸೋಲು ಕಂಡ ಶಕುಂತಳಾ ಶೆಟ್ಟಿ ಪುತ್ತೂರಿನಲ್ಲಿ ಅದೃಷ್ಟ ಪರೀಕ್ಷೆಗಿಳಿದು ಗೆದ್ದದ್ದು ಈಗ ಇತಿಹಾಸ. ಬಂಟ್ವಾಳದಲ್ಲಿ ಎರಡು ಬಾರಿ ಸೋಲು ಕಂಡ ರುಕ್ಮಯ ಪೂಜಾರಿ ವಿಟ್ಲ ಕ್ಷೇತ್ರದಲ್ಲಿ ಸ್ಪರ್ಧಿಸಿ ಸುದೀರ್ಘ ಕಾಲ ಶಾಸಕರಾಗಿದ್ದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕೆಲವೊಂದು ಪ್ರದೇಶಗಳು ಸೇರಿ 1978 ರಲ್ಲಿ ಹೊಸತಾಗಿ ವಿಟ್ಲ ಕ್ಷೇತ್ರ ಅಸ್ತಿತ್ವಕ್ಕೆ ಬಂತು. ವಿಟ್ಲ ಕ್ಷೇತ್ರ 2004 ರ ಚುನಾವಣೆಯವರೆಗೂ ಅಸ್ತಿತ್ವದಲ್ಲಿತ್ತು. ಬಂಟ್ವಾಳ ತಾಲೂಕಿನ ವಿಟ್ಲ ಕ್ಷೇತ್ರದಲ್ಲಿ ಬಿಜೆಪಿಯ ಶಾಸಕರದ್ದೇ ಪಾರಮ್ಯ ಇತ್ತು. ಅಸ್ತಿತ್ವಕ್ಕೆ ಬಂದು ಮೂವತ್ತು ವರ್ಷಗಳಲ್ಲಿ ಏಳು ಚುನಾವಣೆ ಕಂಡ ವಿಟ್ಲದಲ್ಲಿ ನಾಲ್ಕು ಬಾರಿ ಬಿಜೆಪಿ, ಎರಡು ಬಾರಿ ಕಾಂಗ್ರೆಸ್ ಮತ್ತು ಒಂದು ಬಾರಿ ಸಿಪಿಐ ಗೆದ್ದಿತ್ತು.
ಬಂಟ್ವಾಳದಲ್ಲಿ 1972ರಲ್ಲಿ ಗೆದ್ದಿದ್ದ ಸಿಪಿಐನ ಬಿ.ವಿ.ಕಕ್ಕಿಲ್ಲಾಯ 1978ರಲ್ಲಿ ಹೊಸತಾಗಿ ರಚನೆಯಾದ ವಿಟ್ಲ ಕ್ಷೇತ್ರದಲ್ಲೂ ಗೆದ್ದು ಮೊದಲ ಶಾಸಕರೆನಿಸಿಕೊಂಡಿದ್ದರು. ಅದಾದ ಬಳಿಕ ಎರಡು ಬಾರಿ ಕಾಂಗ್ರಸ್ ಗೆದ್ದದ್ದು ಹೊರತುಪಡಿಸಿದರೆ, ಮತ್ತೆಲ್ಲಾ ಬಾರಿ ಬಿಜೆಪಿ ಪಕ್ಷವೆ ಗೆಲುವು ಸಾಧಿಸಿತ್ತು.
ಹೆಸರಿಗೆ ವಿಟ್ಲ ಕ್ಷೇತ್ರವಾದರೂ ಆಡಳಿತವೆಲ್ಲಾ ಬಂಟ್ವಾಳ ತಾಲೂಕಿನ ಕೇಂದ್ರ ಬಿ.ಸಿ.ರೋಡ್ನಲ್ಲೇ ನಡೆಯುತ್ತಿತ್ತು. ಇದಕ್ಕೊಂದು ಕಾರಣವೂ ಇದೆ. ವಿಟ್ಲ ಕ್ಷೇತ್ರ ವಿಟ್ಲ, ಕನ್ಯಾನ, ಕರೋಪಾಡಿಯಷ್ಟೇ ಅಲ್ಲ, ಬಂಟ್ವಾಳ ತಾಲೂಕಿನ ಹೆಡ್ ಕ್ವಾರ್ಟಸ್ ಆಗಿರುವ ಬಿ.ಸಿ.ರೋಡ್ ಅನ್ನೂ ಒಳಗೊಂಡಿತ್ತು. ಹೇಗೆಂದರೆ, ಬಂಟ್ವಾಳ ತಾಲೂಕು ಕಚೇರಿ, ಕೃಷಿ, ವಿದ್ಯುತ್, ತೋಟಗಾರಿಕೆ ಇಲಾಖೆ, ತಾಲೂಕು ಪಂಚಾಯಿತಿ ಕಚೇರಿ ಸಹಿತ ತಾಲೂಕು ಮಟ್ಟದ ಕಚೇರಿಗಳು, ಬಂಟ್ವಾಳ ಪುರಸಭೆ (ಆಗಿನ ಪಟ್ಟಣ ಪಂಚಾಯಿತಿ) ವ್ಯಾಪ್ತಿಯ ಬಹುತೇಕ ಭಾಗಗಳೆಲ್ಲವೂ ವಿಟ್ಲ ಕ್ಷೇತ್ರಕ್ಕೆ ಒಳಪಡುತ್ತಿತ್ತು. ಬಂಟ್ವಾಳ ಶಾಸಕರಿಗೆ ಗುರುಪುರ ಫಿರ್ಕಾ ದೊರಕಿದ್ದರೆ, ವಿಟ್ಲ ಶಾಸಕರಿಗೆ ಶೇಕಡಾ ಅರುವತ್ತರಷ್ಟು ಬಂಟ್ವಾಳ ತಾಲೂಕು ದೊರಕುತ್ತಿತ್ತು.
ಬಂಟ್ವಾಳ ಕ್ಷೇತ್ರ ಪ್ರತಿನಿಧಿಸಿದ ಶಾಸಕರು:
1952 - ಬಿ.ವೈಕುಂಠ ಬಾಳಿಗಾ (ಕಾಂಗ್ರೆಸ್) (ಪಾಣೆಮಂಗಳೂರು ಕ್ಷೇತ್ರ)
1957 - ಡಾ. ಕೆ. ನಾಗಪ್ಪ ಆಳ್ವ (ಕಾಂಗ್ರೆಸ್) (ಪಾಣೆಮಂಗಳೂರು ಕ್ಷೇತ್ರ)
1962 - ಡಾ. ಕೆ.ನಾಗಪ್ಪ ಆಳ್ವ (ಕಾಂಗ್ರೆಸ್) (ಪಾಣೆಮಂಗಳೂರು ಕ್ಷೇತ್ರ)
1967 - ಕೆ. ಲೀಲಾವತಿ ರೈ (ಕಾಂಗ್ರೆಸ್)
1972 - ಬಿ.ವಿ.ಕಕ್ಕಿಲ್ಲಾಯ (ಸಿಪಿಐ)
1978 - ಬಿ.ಎ.ಮೊಯಿದ್ದೀನ್ (ಕಾಂಗ್ರೆಸ್-ಐ)
1983 - ಎನ್.ಶಿವರಾವ್ (ಬಿಜೆಪಿ)
1985 - ಬಿ.ರಮಾನಾಥ ರೈ (ಕಾಂಗ್ರೆಸ್)
1989 - ಬಿ.ರಮಾನಾಥ ರೈ (ಕಾಂಗ್ರೆಸ್)
1994 - ಬಿ.ರಮಾನಾಥ ರೈ (ಕಾಂಗ್ರೆಸ್)
1999 - ಬಿ.ರಮಾನಾಥ ರೈ (ಕಾಂಗ್ರೆಸ್)
2004 - ಬಿ.ನಾಗರಾಜ ಶೆಟ್ಟಿ (ಬಿಜೆಪಿ)
2008 - ಬಿ.ರಮಾನಾಥ ರೈ (ಕಾಂಗ್ರೆಸ್)
2013 - ಬಿ.ರಮಾನಾಥ ರೈ (ಕಾಂಗ್ರೆಸ್)
2018 - ಯು.ರಾಜೇಶ್ ನಾಯ್ಕ್ (ಬಿಜೆಪಿ)
ವಿಟ್ಲ ಪ್ರತಿನಿಧಿಸಿದವರು:
1978 - ಬಿ.ವಿ.ಕಕ್ಕಿಲ್ಲಾಯ (ಸಿಪಿಐ–ಕಾಂಗ್ರೆಸ್ ಬೆಂಬಲ)
1983 - ಎ.ರುಕ್ಮಯ ಪೂಜಾರಿ (ಬಿಜೆಪಿ)
1985 - ಬಿ.ಎ.ಉಮರಬ್ಬ (ಕಾಂಗ್ರೆಸ್)
1989 - ಎ.ರುಕ್ಮಯ ಪೂಜಾರಿ (ಬಿಜೆಪಿ)
1994 - ಎ.ರುಕ್ಮಯ ಪೂಜಾರಿ (ಬಿಜೆಪಿ)
1999 - ಕೆ.ಎಂ.ಇಬ್ರಾಹಿಂ (ಕಾಂಗ್ರೆಸ್)
2004 - ಕೆ.ಪದ್ಮನಾಭ ಕೊಟ್ಟಾರಿ (ಬಿಜೆಪಿ)
ಇದನ್ನೂ ಓದಿ: ಮಹದೇವಪುರ ಕ್ಷೇತ್ರ ಸ್ಥಿತಿಗತಿ: ಲಿಂಬಾವಳಿ ಬಿಗಿ ಹಿಡಿತ ತಪ್ಪಿಸಲು ಕಾಂಗ್ರೆಸ್ ಯತ್ನ