ಬಂಟ್ವಾಳ: ಕೊರೊನಾ ಹಿನ್ನೆಲೆಯಲ್ಲಿ ವಾಣಿಜ್ಯ ಸಂಕೀರ್ಣಗಳಲ್ಲಿ ಬಾಡಿಗೆ ಅಂಗಡಿ ಮಾಡಿಕೊಂಡಿದ್ದವರು ವ್ಯಾಪಾರವೂ ಇಲ್ಲದೆ, ಬಾಡಿಗೆ ಕಟ್ಟಲೂ ಆಗದೆ ಪರಿತಪಿಸುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಉದ್ಯಮಿಯೊಬ್ಬರು ತನ್ನ ಸುಪರ್ದಿಯಲ್ಲಿರುವ ವಾಣಿಜ್ಯ ಸಂಕೀರ್ಣ, ವಸತಿ ಸಂಕೀರ್ಣಗಳಲ್ಲಿರುವ ಬಾಡಿಗೆದಾರರ ಎಲ್ಲ ಬಾಡಿಗೆಯನ್ನು ಮನ್ನಾ ಮಾಡಿದ್ದಾರೆ.
ಸೌದಿ ಅರೇಬಿಯಾದಲ್ಲಿರುವ ಬಂಟ್ವಾಳ ನಿವಾಸಿ ಇಕ್ಬಾಲ್ ತಮ್ಮ ಒಡೆತನದ ಬಂಟ್ವಾಳ, ಬಿಸಿ ರೋಡ್, ಮಂಗಳೂರು ಹಾಗೂ ಉಪ್ಪಳದಲ್ಲಿರುವ ವಸತಿ ಹಾಗೂ ವಾಣಿಜ್ಯ ಕಟ್ಟಡಗಳ ರಾಷ್ಟ್ರೀಕೃತ ಬ್ಯಾಂಕ್ ಶಾಖೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಬಾಡಿಗೆದಾರ ಎರಡು ತಿಂಗಳ ಬಾಡಿಗೆ ಮನ್ನಾ ಮಾಡಿದ್ದಾರೆ. ಈ ರೀತಿ ಮನ್ನಾ ಮಾಡಿದ ಅಂಗಡಿ, ವಸತಿಗಳ ಸಂಖ್ಯೆ ಸುಮಾರು 40ಕ್ಕೂ ಹೆಚ್ಚಿದೆ.
ಲಾಕ್ಡೌನ್ ಸಂದರ್ಭ ಬಂಟ್ವಾಳ-ಕೆಳಗಿನಪೇಟೆಯಲ್ಲಿ ಬಂಟ್ವಾಳ ಜಮಾತ್ ಹಾಗೂ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಸ್ಥಾಪಿಸಲಾದ ಲಾಕ್ಡೌನ್ ಪರಿಹಾರ ನಿಧಿಗೂ ಇಕ್ಬಾಲ್ ಆರ್ಥಿಕ ಸಹಾಯ ಮಾಡಿದ್ದಲ್ಲದೆ, ಊರಿನ ಪ್ರತಿಯೊಂದು ಸೇವಾ ಹಾಗೂ ಕಾರುಣ್ಯ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದಾರೆ.