ಕಡಬ(ದಕ್ಷಿಣ ಕನ್ನಡ): ಇಲ್ಲಿನ ಕೆನರಾ ಬ್ಯಾಂಕ್ನಲ್ಲಿ ಅಡವಿಟ್ಟ ಚಿನ್ನದ ಪೈಕಿ ಕಿವಿಯೋಲೆ ನಾಪತ್ತೆಯಾದ ಹಿನ್ನೆಲೆ ವಾರಸುದಾರರು ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಕಿವಿಯೋಲೆಯನ್ನು ಬ್ಯಾಂಕ್ ಸಿಬ್ಬಂದಿ ಹಿಂತಿರುಗಿಸಿದ ಘಟನೆ ಸೋಮವಾರ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕೋಡಿಂಬಾಳ ಗ್ರಾಮದ ಮಡ್ಯಡ್ಕ ನಿವಾಸಿ ಪುಷ್ಪಲತಾ ಎಂಬುವರು ಸ್ಥಳೀಯ ಕೆನರಾ ಬ್ಯಾಂಕ್ನಲ್ಲಿ ತಮ್ಮ ಚಿನ್ನದೊಡವೆಗಳನ್ನು ಅಡವಿಟ್ಟು ಸಾಲ ಪಡೆದಿದ್ದರು. ಕೆಲ ದಿನಗಳ ಬಳಿಕ ಚಿನ್ನದೊಡವೆಗಳನ್ನು ಪರಶೀಲಿಸಿದಾಗ ಅದರಲ್ಲಿ ಕಿವಿಯೋಲೆಯೊಂದು ನಾಪತ್ತೆಯಾಗಿತ್ತು. ಇದನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಒಪ್ಪದ ಬ್ಯಾಂಕ್ ಸಿಬ್ಬಂದಿ ನೀವು ಅಡಮಾನ ಇಟ್ಟ ಚಿನ್ನ ಇಷ್ಟೇ ಎಂದು ವಾದಿಸಿದ್ದರು.
ಈ ಬಗ್ಗೆ ಪುಷ್ಪಲತಾ ಅವರು ಮಂಗಳೂರು ರೀಜನಲ್ ಅಧಿಕಾರಿಗೆ ದೂರು ನೀಡಿದ್ದಾರೆ. ಅವರು ಕೂಡ ಬ್ಯಾಂಕ್ ಸಿಬ್ಬಂದಿಯ ಮಾತಿಗೆ ಸೊಪ್ಪು ಹಾಕಿದ್ದಾರೆ. ಇದರಿಂದ ಕೆರಳಿದ ವಾರಸುದಾರರು ಡಿ.2ರಂದು ಕಡಬ ಠಾಣೆಗೆ ದೂರು ನೀಡಿದ್ದರು.
ಇದನ್ನೂ ಓದಿ: ಕೊರೊನಾ ಕಾಲದಲ್ಲಿ ಮಲೇರಿಯಾ ಕಂಟಕ.. ಸಾವಿನ ಪ್ರಮಾಣ ಶೇ.14ರಷ್ಟು ಏರಿಕೆ
ಇಂದು ವಿಚಾರಣೆಗಾಗಿ ಪುಷ್ಪಲತಾ ಅವರನ್ನು ಠಾಣೆಗೆ ಕರೆದಾಗ, ಅದೇ ಸಮಯಕ್ಕೆ ಠಾಣೆಗೆ ಬಂದ ಬ್ಯಾಂಕ್ ಸಿಬ್ಬಂದಿ ನಿಮ್ಮ ಕಿವಿಯೋಲೆ ಸಿಕ್ಕಿದೆ ಎಂದು ತಿಳಿಸಿದ್ದಾರೆ. ಬ್ಯಾಂಕ್ನ ಹಳೆಯ ಮ್ಯಾನೇಜರ್ ಅದನ್ನು ಬೇರೆ ಲಾಕರ್ನಲ್ಲಿ ಇಟ್ಟ ಕಾರಣ ಅದು ನಾಪತ್ತೆಯಾಗಿತ್ತು. ತಪಾಸಣೆ ಬಳಿಕ ಕಿವಿಯೋಲೆ ಸಿಕ್ಕಿದೆ ಎಂದು ಬ್ಯಾಂಕ್ ಸಿಬ್ಬಂದಿ ಸಮಜಾಯಿಷಿ ನೀಡಿದ್ದಾರೆ. ಕೊನೆಗೂ ಬ್ಯಾಂಕ್ ಸಿಬ್ಬಂದಿ ಮೇಲೆ ದೂರು ನೀಡಿದ ಬಳಿಕ ಚಿನ್ನದೊಡವೆಯನ್ನು ವಾಪಸ್ ನೀಡಿದ್ದಾರೆ.