ಬೆಳ್ತಂಗಡಿ: ಯಾಂತ್ರೀಕೃತ ಬೇಸಾಯದ ಮೂಲಕ ಹಡೀಲು ಬಿದ್ದಿರುವ ಗದ್ದೆಗಳ ಪುನಶ್ಚೇತನಕ್ಕೆ ಯುವ ಸಮುದಾಯ ಮುಂದಾಗಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿಗಳಾದ ಭಾಸ್ಕರ್ ಅವರು ಯುವ ಜನತೆಗೆ ಕರೆ ನೀಡಿದರು.
ಅವರು ಯುವ ವೇದಿಕೆ, ಮುಗೆರಡ್ಕ-ಮೊಗ್ರು ಇದರ ವತಿಯಿಂದ ಮುಗೇರಡ್ಕದ ಚೆನ್ನಪ್ಪ ಗೌಡ ಪರಾರಿ ಮತ್ತು ಜಾನಕಿ ದಂಬೆತ್ತಿಮಾರು ಇವರಿಗೆ ಸೇರಿದ ಗದ್ದೆಯಲ್ಲಿ ನಡೆದ ‘ಆಟಿಡೊಂಜಿ ನೇಜಿದ ಕೂಟ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ರೈತರಿಗೆ ನೆರವಾಗುವ ದೃಷ್ಟಿಯಿಂದ ಧರ್ಮಸ್ಥಳದ ಧರ್ಮಾಧಿಕಾರಿಗಳು ಕಡಿಮೆ ದರದಲ್ಲಿ ಭತ್ತದ ಬೇಸಾಯಕ್ಕೆ ಬೇಕಾದ ಯಂತ್ರಗಳನ್ನು ಬಾಡಿಗೆಗೆ ನೀಡುವ ಕಾರ್ಯವನ್ನು ಹಮ್ಮಿಕೊಂಡಿದ್ದಾರೆ. ಕೃಷಿಕರು ಇದರ ಪ್ರಯೋಜನ ಪಡೆದು ಭತ್ತದ ಬೇಸಾಯಕ್ಕೆ ಮುಂದಾಗಬೇಕು ಎಂದು ಅವರು ಹೇಳಿದರು.
ನ್ಯಾಯವಾದಿ ಮನೋಹರ ಕುಮಾರ್ ಇಳಂತಿಲ ಮಾತನಾಡಿ, ಕೊರೊನಾ ಲಾಕ್‍ಡೌನ್ ಹಿನ್ನೆಲೆ ಮನೆ ಸೇರಿರುವ ಹೆಚ್ಚಿನ ಜನ ಭತ್ತದ ಬೇಸಾಯದಂತಹ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ. ಯುವ ಜನತೆ ಕೀಳರಿಮೆ ಬಿಟ್ಟು ಹಡೀಲು ಬಿದ್ದ ಗದ್ದೆಗಳಲ್ಲಿ ಭತ್ತದ ಬೇಸಾಯ ಮಾಡುವತ್ತ ಗಮನಹರಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಆರ್.ಎಸ್.ಎಸ್ ಮುಂದಾಳು ರವಿ ಇಳಂತಿಲ, ತಿಮ್ಮಪ್ಪ ಇಳಂತಿಲ, ಸೇವಾ ಪ್ರತಿನಿಧಿ ಸರೋಜಾ, ಕೃಷಿ ಯಂತ್ರಧಾರೆ ವಿಭಾಗದ ವ್ಯವಸ್ಥಾಪಕರಾದ ಸಚಿನ್, ಯುವ ವೇದಿಕೆಯ ಗೌರವಾಧ್ಯಕ್ಷ ಕೇಶವ ಗೌಡ, ಮನ್ಕುಡೆ, ಅಧ್ಯಕ್ಷೆ ರತ್ನಾವತಿ, ಕಾರ್ಯದರ್ಶಿ ರತನ್ ಕುಮಾರ್ ಮತ್ತು ಕೋಶಾಧಿಕಾರಿ ಅಶ್ವಥ್, ಜಾಲ್ನಡೆ, ಲಕ್ಷ್ಮಣ ನಾಯ್ಕ, ಪಳಿಕೆ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅನಾರೋಗ್ಯ ಪೀಡಿತರಾದ ಹೊನ್ನಪ್ಪ ಗೌಡರಿಗೆ ವೇದಿಕೆಯ ವತಿಯಿಂದ ಆರ್ಥಿಕ ಸಹಾಯದ ಚೆಕ್ ಹಸ್ತಾಂತರಿಸಲಾಯಿತು. ಕೇಶವ ಗೌಡ ಕಾರ್ಯಕ್ರಮ ನಿರೂಪಿಸಿ, ದೀಕ್ಷಿತ್ ವಂದಿಸಿದರು.