ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ಕಂಕನಾಡಿ ನಗರ ಹಾಗೂ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲಾಪು ಹಾಗೂ ಬಡೀಲ ಎಂಬಲ್ಲಿ ನೇತ್ರಾವತಿ ನದಿಯಲ್ಲಿನ ಅಕ್ರಮ ಮರಳು ಅಡ್ಡೆಗೆ ದಾಳಿ ನಡೆಸಿ 9.91 ಲಕ್ಷ ರೂ. ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಣ್ಣೂರು ಬಡೀಲ ಹಾಗೂ ಪೆರ್ಮನ್ನೂರು ಗ್ರಾಮದ ಕಲ್ಲಾಪು ಎಂಬಲ್ಲಿನ ನೇತ್ರಾವತಿ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಈ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಇಂದು ಬೆಳಗ್ಗಿನ ಜಾವ 3 ಗಂಟೆಗೆ ಮಂಗಳೂರು ನಗರ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭ ಎರಡು ಟಿಪ್ಪರ್ ಲಾರಿ ಹಾಗೂ ದಾಸ್ತಾನು ಇರಿಸಿದ್ದ 44 ಲೋಡು ಮರಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಸ್ವಾಧೀನ ಪಡಿಸಿಕೊಂಡಿರುವ ಈ ಸೊತ್ತಿನ ಮೌಲ್ಯ ಸುಮಾರು 9.91 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕಂಕನಾಡಿ ನಗರ ಹಾಗೂ ಉಳ್ಳಾಲ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ನಿರೀಕ್ಷಕ ಶಿವಪ್ರಕಾಶ್ ಆರ್. ನಾಯಕ್ ಅವರ ನೇತೃತ್ವದಲ್ಲಿ ನಡೆದಿದ್ದು, ದಾಳಿಯಲ್ಲಿ ಉರ್ವ ಪೊಲೀಸ್ ನಿರೀಕ್ಷಕ ಶರೀಫ್, ಸಂಚಾರ ದಕ್ಷಿಣ ಪೊಲೀಸ್ ಠಾಣೆಯ ನಿರೀಕ್ಷಕ ಗುರು ಕಾಮತ್, ಸಿಸಿಬಿ ಘಟಕದ ಪಿಎಸ್ಐ ಕಬ್ಬಾಳ್ ರಾಜ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದಾರೆ.