ಮಂಗಳೂರು: ಇಂದು ಕರಾವಳಿಯಲ್ಲಿ ಆಟಿ ಅಮಾವಾಸ್ಯೆ ಆಚರಿಸಲಾಗುತ್ತಿದೆ. ಇದರ ಪ್ರಯುಕ್ತ ಕರಾವಳಿಯ ಜನರು ಹಾಲೆ (ಸಪ್ತಪರ್ಣಿ) ಮರದ ತೊಗಟೆಯ ಕಷಾಯ ಸೇವನೆ ಮಾಡಿದರು. ಆಷಾಢ ಮಾಸವನ್ನು ಕರಾವಳಿಯಲ್ಲಿ ಅಟಿ ಎಂದು ಕರೆಯಲಾಗುತ್ತದೆ. ಈ ತಿಂಗಳಲ್ಲಿ ತುಳುನಾಡಿನ ಜನರ ಆಹಾರ ಕ್ರಮ ಭಿನ್ನವಾಗಿದ್ದು, ಜೊತೆಗೆ ಆಟಿ ಅಮಾವಾಸ್ಯೆಯ ಆಚರಣೆಯೂ ಅಷ್ಟೇ ವಿಭಿನ್ನವಾಗಿರುತ್ತದೆ.
ಆಟಿ ಅಮಾವಾಸ್ಯೆ ದಿನ ಪಾಲೆ/ಹಾಲೆ ಮರದ ಕಷಾಯ ಕುಡಿಯುವುದು ವಾಡಿಕೆ. ಸಾವಿರದೊಂದು ಬಗೆಯ ಔಷಧೀಯ ಗುಣಗಳಿವೆ ಎಂದು ನಂಬಿರುವ ಈ ಕಷಾಯವನ್ನು ತುಳುನಾಡಿನ ಜನರು ಆಟಿ ಅಮಾವಾಸ್ಯೆಯಂದು ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸುತ್ತಾರೆ. ಇದರಿಂದ ಮುಂದಿನ ವರ್ಷದ ಆಷಾಢ ಮಾಸದವರೆಗೂ ಯಾವುದೇ ಕಾಯಿಲೆಗಳು ಹತ್ತಿರ ಸುಳಿಯಲಾರವು ಎಂಬುದು ಇಲ್ಲಿನ ಜನರ ನಂಬಿಕೆ. ಹಿರಿಯರು ಅನುಸರಿಸಿಕೊಂಡು ಬಂದಿರುವ ಈ ಪದ್ಧತಿಗಳನ್ನು ಈಗಲೂ ಶ್ರದ್ಧೆಯಿಂದ ಪಾಲಿಸಿಕೊಂಡು ಬರಲಾಗುತ್ತಿದೆ.
ಸಾಮಾನ್ಯವಾಗಿ ಪ್ರತಿ ಗೊಂಚಲಲ್ಲೂ ಏಳು ಎಲೆಗಳನ್ನು ಹೊಂದಿರುವುದರಿಂದ ಇದನ್ನು ಸಪ್ತಪರ್ಣಿ ಮರ ಎಂದು ಕರೆಯಲಾಗುತ್ತದೆ. ಪಾಲೆ ಮರದ ತೊಗಟೆಯನ್ನು ತೆಗೆಯಲು ಲೋಹವನ್ನು ಬಳಸಿದರೆ ತೊಗಟೆಯ ಔಷಧೀಯ ಗುಣಗಳು ಕಡಿಮೆಯಾಗುತ್ತದೆಯೆಂದು ಸೂರ್ಯೋದಯಕ್ಕೂ ಮುನ್ನ ಕುಟುಂಬದ ಹಿರಿಯರು ಹೋಗಿ ಕಲ್ಲಿನಿಂದ ಮರದ ತೊಗಟೆಯನ್ನು ಕೆರೆದು ಅದನ್ನು ತರುತ್ತಾರೆ. ಹಾಗೆ ತಂದ ಪಾಲೆ ಮರದ ತೊಗಟೆಗೆ ಜೀರಿಗೆ, ಬೆಳ್ಳುಳ್ಳಿ, ಅರಿಶಿನ ಮತ್ತು ಒಣ ಮೆಣಸಿನಕಾಯಿಗಳನ್ನು ಮಿಶ್ರಣ ಮಾಡಿ ಅರೆದು ರಸ ತೆಗೆದು ಬಳಿಕ ಮನೆಯಲ್ಲಿರುವ ಎಲ್ಲರಿಗೂ ನೀಡುತ್ತಾರೆ. ಇದನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ಕುಡಿಯಲಾಗುತ್ತದೆ. ಕಷಾಯ ಕುಡಿದ ಬಳಿಕ ಮೆಂತೆ ಗಂಜಿಯನ್ನು ಸೇವಿಸುವುದು ಕ್ರಮ.
ಇದನ್ನೂ ಓದಿ: ಮಾರುಕಟ್ಟೆ ಮಾಹಿತಿ: ಇಂದಿನ ತರಕಾರಿ ಬೆಲೆ ಹೀಗಿದೆ..