ಮಂಗಳೂರು: ನಗರದಲ್ಲಿ ಮತ್ತೆ ರೌಡಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಯುವಕನೊಬ್ಬನನ್ನು ಗಂಭೀರವಾಗಿ ಗಾಯಗೊಳಿಸಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಅಶೋಕನಗರ ನಿವಾಸಿ ನವನೀತ್, ಹೊಯಿಗೆಬೈಲ್ ನಿವಾಸಿ ಹೇಮಂತ್, ಬೋಳೂರು ನಿವಾಸಿ ದೀಕ್ಷಿತ್, ಆರೋಪಿಗಳಿಗೆ ತಲೆಮರೆಸಿಕೊಳ್ಳಲು ಸಹಾಯ ಮಾಡಿರುವ ಸಂದೇಶ್ ಬಂಧಿತ ಆರೋಪಿಗಳು. ಅಳಕೆ ಗ್ಯಾಂಗ್ಗೆ ಸೇರಿದ ಶ್ರವಣ್ ಗ್ಯಾಂಗ್ ವಾರ್ ನಿಂದ ಗಂಭೀರವಾಗಿ ಗಾಯಗೊಂಡ ಯುವಕ.
2020ರಲ್ಲಿ ಬರ್ಕೆಯಲ್ಲಿ ನಡೆದ ಇಂದ್ರಜಿತ್ ಎಂಬಾತನ ಕೊಲೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕೊಲೆ ಆರೋಪಿಗಳು ಗಾಯಾಳು ಶ್ರವಣ್ ಸಹೋದರರಾಗಿದ್ದಾರೆ. ಇಂದ್ರಜಿತ್ ಕೊಲೆಗೆ ಪ್ರತೀಕಾರವಾಗಿ ಈ ಕೊಲೆಯತ್ನ ನಡೆದಿದೆ.
ನವೆಂಬರ್ 28 ರಂದು 8 ಮಂದಿಯ ತಂಡವು ಮಾರಕಾಸ್ತ್ರಗಳಿಂದ ಶ್ರವಣ್ ಮೇಲೆ ದಾಳಿ ನಡೆಸಿದೆ. ಘಟನೆಯಲ್ಲಿ ಶ್ರವಣ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ದೇಹಕ್ಕೆ 17 ಕಡೆಗೆ ಸ್ಟಿಚ್ ಹಾಕಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಈ ಕೃತ್ಯಕ್ಕೆ ಬಳಸಿರುವ ಮೂರು ತಲವಾರು, ಮೂರು ದ್ವಿಚಕ್ರ ವಾಹನಗಳು, ಒಂದು ಆಟೊ ರಿಕ್ಷಾವನ್ನು ಸ್ವಾಧೀನಪಡಿಸಲಾಗಿದೆ. ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : 6ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ : ಶಾಲಾ ವಾಹನ ಚಾಲಕ ಅರೆಸ್ಟ್