ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಹುಡುಗಿಯೊಂದಿಗೆ ಇದ್ದ ಬೇರೆ ಸಮುದಾಯದ ಯುವಕನಿಗೆ ಕೆಲವರು ಥಳಿಸಿದ್ದು, ಯುವಕ ಆಸ್ಪತ್ರೆಗೆ ದಾಖಲಾದ ಘಟನೆ ಸುಬ್ರಹ್ಮಣ್ಯದಲ್ಲಿ ನಡೆದಿದೆ. ಈ ಯುವಕನ ವಿರುದ್ಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣವೂ ದಾಖಲಾಗಿದೆ. ಅಲ್ಲದೇ, ವಿದ್ಯಾರ್ಥಿನಿ ಜೊತೆ ತಿರುಗಾಡುತ್ತಿದ್ದ ಎಂದು ಯುವಕನಿಗೆ ಕೆಲವರು ಸೇರಿಕೊಂಡು ಥಳಿಸಿ, ಕೊಲೆ ಯತ್ನ ನಡೆಸಿದ್ದಾರೆ ಎಂದು ಕೂಡ ದೂರು ನೀಡಲಾಗಿದೆ.
ಕುಕ್ಕೆ ಸುಬ್ರಹ್ಮಣ್ಯ ಬಸ್ ನಿಲ್ದಾಣದ ಬಳಿ ನಿಂತಿರುವಾಗ ಬಂದ ಗುಂಪು, ಯುವಕನನ್ನು ಕುಮಾರಧಾರ ಬಳಿ ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸುಮಾರು 10-12 ಜನರಿದ್ದ ಗುಂಪು ತನ್ನನ್ನು ಸುತ್ತುವರಿದು ಗಂಭೀರ ಹಲ್ಲೆ ನಡೆಸಿದೆ. ಕೈ, ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ, ಚಾಕುವಿನಿಂದ ಇರಿದು ಕೊಲ್ಲಲು ಯತ್ನಿಸಲಾಗಿದೆ. ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಯುವಕ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಹಲ್ಲೆಗೊಳಗಾದ ಯುವಕ ಸುಳ್ಯ ಸಮೀಪದ ಗ್ರಾಮವೊಂದರ ನಿವಾಸಿ ಎಂದು ತಿಳಿದು ಬಂದಿದೆ. ಗಂಭೀರ ಗಾಯಗೊಂಡ ಈತ ಸುಳ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾನೆ. ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಅಪರಿಚಿತ ವ್ಯಕ್ತಿಗಳ ವಿರುದ್ಧ, ಸುಬ್ರಹ್ಮಣ್ಯ ಠಾಣೆಯಲ್ಲಿ ಕಲಂ 323, 324, 307, 365, 143, 147 ಜೊತೆಗೆ 149 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದೆ.
ಪ್ರತಿದೂರು: ಹಲ್ಲೆಗೊಳಗಾದ ಯುವಕನ ದೂರಿನ ನಡುವೆ ಯುವತಿಯ ತಂದೆಯೂ ಸಹ ಯುವಕನ ವಿರುದ್ಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಯುವಕನ ವಿರುದ್ಧ ಪೋಕ್ಸೋ ಸೇರಿದಂತೆ ಇತರ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ. ತನ್ನ 17 ವರ್ಷದ ಮಗಳು ಕಾಲೇಜು ಮುಗಿಸಿ ಮನೆಗೆ ಹಿಂತಿರುಗಲು ಸುಬ್ರಹ್ಮಣ್ಯ ಬಸ್ ನಿಲ್ದಾಣದಲ್ಲಿ ನಿಂತಿದ್ಧಾಗ ಆರೋಪಿಯು ಆಕೆಗೆ ತನ್ನನ್ನು ಪ್ರೀತಿಸುವಂತೆ ಒತ್ತಡ ಹಾಕಿದ್ದಾನೆ. ಮಗಳ ಬಳಿ ದೂರವಾಣಿ ಸಂಖ್ಯೆ ನೀಡುವಂತೆ ಕೇಳಿದ್ದಾನೆ. ಕೊಡಲು ನಿರಾಕರಿಸಿದ್ದಕ್ಕೆ ಅವಳ ಕೈ ಹಿಡಿದು ಎಳೆದಾಡಿ ಮಾನಭಂಗಕ್ಕೆ ಯತ್ನಿಸಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಬಳಿಕ ಮಗಳು ಅಲ್ಲಿಂದ ತಪ್ಪಿಸಿಕೊಂಡು ಮನೆಗೆ ಬಂದಿದ್ದಾಳೆ. ಆಕರ ವಿಚಲಿತಳಾಗಿರುವುದು ಕಂಡು ವಿಚಾರಿಸಿದಾಗ ಭಯಗೊಂಡು ತಡವಾಗಿ ಈ ಬಗ್ಗೆ ತಿಳಿಸಿದ್ದಾಳೆ. ಹೀಗಾಗಿ ಅಪ್ರಾಪ್ತ ಮಗಳಿಗೆ ಪ್ರೀತಿಸುವಂತೆ ಒತ್ತಡ ಹಾಕಿ, ಬೆದರಿಕೆ ಹಾಕಿರುವ ಆರೋಪಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಯುವತಿಯ ತಂದೆ ದೂರು ನೀಡಿದ್ದಾರೆ. ಈ ಬಗ್ಗೆ ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ಕಲಂ: 354(ಬಿ), 506 ಐಪಿಸಿ, ಕಲಂ: 12 ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಹೆಂಡತಿ ತವರಿಂದ ಬರಲಿಲ್ಲವೆಂದು ಸ್ವಂತ ಮಗಳನ್ನೇ ಉಸಿರುಗಟ್ಟಿಸಿ ಕೊಂದ ಪಾಪಿ!
ಪುತ್ತೂರಿನಲ್ಲಿ ಯುವಕನ ವಿರುದ್ಧ ಪ್ರಕರಣ: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಮತ್ತು ಕಾಲೇಜೊಂದರ ವಿದ್ಯಾರ್ಥಿನಿಯಾಗಿರುವ ಯುವತಿಗೆ ಕಿರುಕುಳ ನೀಡಿ ಬೆದರಿಕೆ ಹಾಕಿದ ಆರೋಪದಲ್ಲಿ ಪುತ್ತೂರಿನ ಯುವಕನೊಬ್ಬನ ವಿರುದ್ಧ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಮತ್ತು ಬೆದರಿಕೆ ಕುರಿತಂತೆ ಎರಡು ಪತ್ಯೇಕ ಪ್ರಕರಣ ದಾಖಲಾಗಿದೆ. ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ನಿತೀಶ್ ರೈ ಎಂಬಾತನೆ ಆರೋಪಿಯಾಗಿದ್ದಾನೆ.
ಆರೋಪಿಯು ಬಾಲಕಿಯೊಬ್ಬಳಿಗೆ ಪ್ರೀತಿ ಮಾಡುವಂತೆ ಒತ್ತಾಯಿಸಿ, ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ದೂರಲಾಗಿದೆ. ಮೊಬೈಲ್ಗೆ ಕರೆ ಮಾಡಿ ಕಿರುಕುಳ ನೀಡಿದ್ದನಲ್ಲದೇ, ಅಪಪ್ರಚಾರ ಮಾಡುತ್ತೇನೆ ಎಂದು ಬ್ಲ್ಯಾಕ್ಮೇಲ್ ಮಾಡಿದ್ದಾನೆ. ಯಾರಿಗಾದರೂ ಈ ವಿಚಾರ ತಿಳಿಸಿದರೆ ಕೊಲೆಗೈಯ್ಯುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.
ಪೋಕ್ಸೋ ಪ್ರಕರಣದ ಜೊತೆಗೆ ನಿತೀಶ್ ರೈ ವಿರುದ್ಧ ಬೆದರಿಕೆ ಪ್ರಕರಣವೂ ದಾಖಲಾಗಿದೆ. ಪುತ್ತೂರಿನ ಕಾಲೇಜೊಂದರ ವಿದ್ಯಾರ್ಥಿನಿಯೊಬ್ಬಳ ಮೊಬೈಲ್ಗೆ ಕರೆ ಮಾಡಿ ಪದೇ ಪದೆ ಪ್ರೀತಿಸುವಂತೆ ಒತ್ತಾಯ ಮಾಡುತ್ತಿರುವುದಲ್ಲದೆ, ಇತ್ತೀಚೆಗೆ ವಿದ್ಯಾರ್ಥಿನಿಯ ಮನೆ ಬಳಿ ತೆರಳಿ ಬೆದರಿಕೆ ಹಾಕಿರುವ ಬಗ್ಗೆ ವಿದ್ಯಾರ್ಥಿನಿ ಸಂಪ್ಯ ಠಾಣೆಗೆ ದೂರು ನೀಡಿದ್ದಾರೆ. ಈ ಆರೋಪಿಯ ವಿರುದ್ಧ ಪ್ರತ್ಯೇಕ ಎರಡು ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಸಂಪ್ಯ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ರೈಲಿನಲ್ಲಿ ಉಪದ್ರವ, ದುರ್ವರ್ತನೆ: 1,200ಕ್ಕೂ ಹೆಚ್ಚು ತೃತೀಯ ಲಿಂಗಿಗಳು ಅರೆಸ್ಟ್