ಮಂಗಳೂರು: ನಗರದ ಮಲ್ಲೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ಮಾಡಿ ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳನ್ನು ಇಂದು ಮಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕಿನ ಫರಂಗಿಪೇಟೆ ಮಹಮ್ಮದ್ ಇದಾಯುತುಲ್ಲಾ (25), ಅಹಮ್ಮದ್ ಬಶೀರ್ (30), ಅಬ್ದುಲ್ ಸಿದ್ದೀಕ್ (33) ಹಾಗೂ ಮಂಗಳೂರು ತಾಲೂಕಿನ ಕುತ್ತಾರು, ಮದನಿ ನಗರದ ಅಬೂಬಕ್ಕರ್ ಸಿದ್ದೀಕ್ (26) ಬಂಧಿತ ಆರೋಪಿಗಳು. ಮತ್ತೋರ್ವ ಆರೋಪಿ ಮನ್ಸೂರ್ ಅಲಿ ಪರಾರಿಯಾಗಿದ್ದಾನೆ.
ಪಿಡಿಒ ರಾಜೇಂದ್ರ ಶೆಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೇ 25ರಂದು ಮಧ್ಯಾಹ್ನ 1.45ರ ಸುಮಾರಿಗೆ ಕರ್ತವ್ಯದಲ್ಲಿದ್ದ ಸಂದರ್ಭ ನಾಲ್ವರು ಯುವಕರು ಮಾಸ್ಕ್ ಧರಿಸದೆ ನಿಂತಿದ್ದರು. ಪಿಡಿಒ ಅವರಿಗೆ ಮಾಸ್ಕ್ ಧರಿಸಲು ಸೂಚನೆ ನೀಡಿದ್ದಾರೆ. ಆದರೆ ಯುವಕರು ಮಾಸ್ಕ್ ಧರಿಸದೆ ಉಡಾಫೆಯಿಂದ ವರ್ತಿಸಿದ್ದಾರೆ. ಈ ಸಂದರ್ಭ ಪಿಡಿಒ ತಮ್ಮ ಮೊಬೈಲ್ನಿಂದ ಅವರ ಫೋಟೋ ಕ್ಲಿಕ್ಕಿಸಲು ಯತ್ನಿಸಿದಾಗ ಎಲ್ಲರೂ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆಯ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.