ಮಂಗಳೂರು : ಹೊಟೇಲ್ನಲ್ಲಿ ಬರ್ತಡೇ ಪಾರ್ಟಿ ಸಂಭ್ರಮದಲ್ಲಿದ್ದ ಯುವತಿ ಹಾಗೂ ಆಕೆಯ ಸ್ನೇಹಿತರ ಮೇಲೆ ಹಲ್ಲೆ ಮಾಡಿ ದಾಂಧಲೆ ನಡೆಸಿದ ಮೂವರು ಆರೋಪಿಗಳನ್ನು ಕದ್ರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬೋಳೂರು ಬೊಕ್ಕಪಟ್ಣ ನಿವಾಸಿ ತ್ರಿಶೂಲ್ ಸಾಲ್ಯಾನ್, ಕೋಡಿಕಲ್ ಕಲ್ಲಕಂಡ ನಿವಾಸಿ ಸಂತೋಷ್ ಪೂಜಾರಿ ಹಾಗೂ ಅಶೋಕನಗರ ಫಲ್ಗುಣಿ ನಗರ ನಿವಾಸಿ ಡ್ಯಾನಿಶ್ ಬಂಧಿತರು.
ಪ್ರಕರಣದ ಹಿನ್ನೆಲೆ : ಯುವತಿಯ ಹೆತ್ತವರು ಕೆನಡಾದಲ್ಲಿ ನೆಲೆಸಿದ್ದು, ಆಕೆ ಪುತ್ತೂರಿನ ಕೋಲ್ಕಡದಲ್ಲಿ ಅಜ್ಜಿ ಮನೆಯಲ್ಲಿ ವಾಸವಿದ್ದಾಳೆ. ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಳೆ. ಒಂದೂವರೆ ವರ್ಷದಿಂದ ಆರೋಪಿ ತ್ರಿಶೂಲ್ನೊಂದಿಗೆ ಸ್ನೇಹದಿಂದಿದ್ದ ಯುವತಿಗೆ, ಆತ ತನ್ನೊಂದಿಗೆ ಸಂಪರ್ಕ ಮುಂದುವರಿಸಬೇಕು, ಪ್ರೀತಿ ಮಾಡಬೇಕು ಎಂದು ಸತಾಯಿಸುತ್ತಿದ್ದ. ಹಾಗಾಗಿ, ಯುವತಿ ತ್ರಿಶೂಲ್ನೊಂದಿಗಿನ ಸಂಬಂಧ ಮುರಿಯುತ್ತೇನೆ ಎಂದು ಆತ ಕೊಟ್ಟಿರುವ ಗಿಫ್ಟ್ ಹಾಗೂ ಉಂಗುರವನ್ನು ಹಿಂದಿರುಗಿಸಲು, ಜ.30 ರಂದು ತಾನಿರುವ ಹಾಸ್ಟೆಲ್ಗೆ ಕರೆಸಿಕೊಂಡಿದ್ದಳು. ಅಲ್ಲಿ, ಆರೋಪಿ ತ್ರಿಶೂಲ್ ಸಿಟ್ಟಾಗಿ, ಅನುಚಿತವಾಗಿ ವರ್ತಿಸಿ, 'ನಿನ್ನನ್ನು ಜೀವಂತವಾಗಿ ಬಿಡುವುದಿಲ್ಲ' ಎಂದು ಚಾಕು ತೋರಿಸಿದ್ದಾನೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಇದಾದ, ಬಳಿಕ ಯುವತಿ ತನ್ನ ಸ್ನೇಹಿತರೊಂದಿಗೆ ಸ್ನೇಹಿತೆಯೋರ್ವಳ ಬರ್ತಡೇ ಪಾರ್ಟಿ ನಡೆಸಲು ಕದ್ರಿ ಠಾಣಾ ವ್ಯಾಪ್ತಿಯಲ್ಲಿರುವ ಹೊಟೇಲ್ಗೆ ತೆರಳಿದ್ದಳು. ಈ ವೇಳೆ ತ್ರಿಶೂಲ್ ತನ್ನ ಸ್ನೇಹಿತರನ್ನು ಕರೆಯಿಸಿ ಏಕಾಏಕಿ ಹೋಟೆಲ್ಗೆ ನುಗ್ಗಿ ಹೆಲ್ಮೆಟ್, ಕೈ ಹಾಗೂ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ಪ್ರತೀಕ್ಷ್ ಎಂಬ ಯುವಕನ ಮೈಮೇಲೆ ನಾಲ್ಕೈದು ಕಡೆಗಳಲ್ಲಿ ಚಾಕು ಇರಿತದಿಂದ ಗಾಯಗಳಾಗಿವೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ. ಯುವತಿ ನೀಡಿರುವ ದೂರಿನ ಆಧಾರದಲ್ಲಿ ಕದ್ರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.