ಮಂಗಳೂರು: ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಪಂಪ್ವೆಲ್ ಮೇಲ್ಸೇತುವೆಯ ಕೆಳಭಾಗದಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಮಂಗಳೂರಿನ ಪಂಪ್ವೆಲ್ ಮೇಲ್ಸೇತುವೆಯ ಕಾಮಗಾರಿ ಕಳೆದ ವರ್ಷ ಪೂರ್ಣಗೊಂಡಿತ್ತು. ಈ ಕಾಮಗಾರಿ ವೇಳೆ ನೀರು ಹರಿದು ಹೋಗಲು ವ್ಯವಸ್ಥೆ ಮಾಡದಿರುವುದೇ ಕೃತಕ ನೆರೆ ಸೃಷ್ಟಿಯಾಗಲು ಕಾರಣವಾಗಿದೆ.
ಮೇಲ್ಸೇತುವೆಯ ಕೆಳಭಾಗದಲ್ಲಿ ಸರ್ವೀಸ್ ರಸ್ತೆ ಇದ್ದು, ಈ ರಸ್ತೆ ಕೃತಕ ನೆರೆಗೆ ತುಂಬಿ ಹೋಗಿದೆ. ಇದರ ಸನಿಹದಲ್ಲಿರುವ ತೆರೆದ ಚರಂಡಿಯಲ್ಲಿ ನೀರು ಹರಿದು ಹೋಗದೆ ಈ ಅವ್ಯವಸ್ಥೆ ಸೃಷ್ಟಿಯಾಗಿದ್ದು, ವಾಹನಗಳ ಓಡಾಟಕ್ಕೆ ಅನಾನುಕೂಲವಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋ ವೈರಲ್ ಆಗ್ತಿದ್ದಂತೆ ಎಚ್ಚೆತ್ತುಕೊಂಡ ಅಧಿಕಾರಿಗಳು ಚರಂಡಿ ನೀರನ್ನು ಸರಾಗವಾಗಿ ಹರಿದುಹೋಗುವಂತೆ ಮಾಡಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿದ್ದಾರೆ.