ಪುತ್ತೂರು: ಕಬಕದ ಮನೆಯೊಂದರಲ್ಲಿ ನಡೆದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಕೊಟ್ಟ 24 ಗಂಟೆಯೊಳಗೆ ತನಿಖೆ ಕೈಗೆತ್ತಿಕೊಂಡ ಪುತ್ತೂರು ನಗರ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಬಕ ವಿದ್ಯಾಪುರ ನಿವಾಸಿ ಸಂಸೇರ್ (23) ಮತ್ತು ಕೊಡಿಪ್ಪಾಡಿ ಗ್ರಾಮದ ಓಜಾಲ ನಿವಾಸಿ ಮಹಮ್ಮದ್ ಮುಬಾರಕ್ (26) ಬಂಧಿತ ಆರೋಪಿಗಳು. ಉರಿಮಜಲು ನಿವಾಸಿ ಕಾರ್ಯಾಡಿ ಕ್ವಾಟ್ರಸ್ನ ಮೊಹಮ್ಮದ್ ನೌಫಲ್ ಅವರ ಪತ್ನಿ ರಝೀನ ಅವರು ಜ.7ಕ್ಕೆ ಕಬಕದಲ್ಲಿರುವ ತನ್ನ ತಂದೆಯ ಮನೆಗೆ ಬಂದಿದ್ದ ಸಮಯ ತನ್ನ ಚಿನ್ನಾಭರಣವನ್ನು ಕಪಾಟುವಿನಲ್ಲಿ ಇಟ್ಟಿದ್ದರು. ಆದರೆ ಜ.10 ರಂದು ಚಿನ್ನಾಭರಣ ಕಳವಾಗಿರುವುದು ಬೆಳಕಿಗೆ ಬಂದಿತ್ತು.
ಇದೇ ರೀತಿ ಈ ಹಿಂದೆಯೂ ಆಕೆಯ ಅಕ್ಕನ ಮಗಳ ಚಿನ್ನವೂ ಕಳವಾಗಿತ್ತು. ಈ ನಿಟ್ಟಿನಲ್ಲಿ ರಝೀನ ಅವರು ಜ.14ರಂದು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನಂತರ ಠಾಣೆಯ ವೃತ್ತ ನಿರೀಕ್ಷಕ ಗೋಪಾಲ್ ನಾಯ್ಕ್ ಅವರ ನಿರ್ದೇಶನದಂತೆ ತಕ್ಷಣ ತನಿಖೆ ಕೈಗೆತ್ತಿಕೊಂಡ ಎಸ್ಐ ಜಂಬೂರಾಜ್ ಮಹಾಜನ್ ಅವರು ರಾತ್ರೋ ರಾತ್ರಿಯೇ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.
ಓದಿ: ಧಾರವಾಡ ಅಪಘಾತ: ಒಂದೇ ಶಾಲೆಯಲ್ಲಿ ಓದಿದ್ದ 11 ಬಾಲ್ಯದ ಗೆಳತಿಯರು ಸಾವು!