ಮಂಗಳೂರು: ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜನಪ್ರತಿನಿಧಿಗಳ ನಡುವೆ ಮಾತಿನ ಚಕಮಕಿ ನಡೆದಿದೆ.
ಕೊರೊನಾ ನಿಯಂತ್ರಣ ಕುರಿತ ಸಭೆಯಲ್ಲಿ ಬಿಜೆಪಿ-ಕಾಂಗ್ರೆಸ್ ಶಾಸಕರ ನಡುವೆ ವಾಕ್ಸಮರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರ ನೇತೃತ್ವದಲ್ಲಿ ಸಭೆ ನಡೆದಿದ್ದು, ಸಭೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರ ನಡುವೆ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದೆ. ಸಭೆಯಲ್ಲಿ ಕೋವಿಡ್ ಸೋಂಕಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ತೆಗೆದುಕೊಂಡ ಕಾನೂನು ಕ್ರಮಗಳ ಬಗ್ಗೆ ಮಾತುಕತೆ ನಡೆಯುತ್ತಿತ್ತು. ಈ ಸಂದರ್ಭ ಶಾಸಕ ಯು.ಟಿ.ಖಾದರ್ ಜಿಲ್ಲಾಡಳಿತ ಏನೇ ನಿರ್ಧಾರ ಕೈಗೊಂಡರೂ ಬಳಿಕ ಅದನ್ನು ಪಾಲಿಸಲಾಗುತ್ತಿಲ್ಲ ಎಂದು ಇತ್ತೀಚೆಗೆ ಕೋವಿಡ್ ಸೋಂಕಿತೆಯ ಅಂತ್ಯಸಂಸ್ಕಾರಕ್ಕೆ ಆದ ಅಡ್ಡಿಯನ್ನು ಉದಾಹರಿಸಿ ತಿಳಿಸಿದ್ದಾರೆ. ಇದರಿಂದ ಗರಂ ಆದ ಶಾಸಕ ವೇದವ್ಯಾಸ ಕಾಮತ್, ಲಾಕ್ಡೌನ್ ಇದ್ದರೂ ಇಟಲಿಯಲ್ಲಿ ಸಿಲುಕಿಕೊಂಡಿದ್ದ ಯುವತಿ ಹೇಗೋ ಬೆಂಗಳೂರಿಗೆ ಬಂದದ್ದನ್ನು ಅಕಸ್ಮಾತ್ ಅಲ್ಲಿದ್ದವರು ಕರೆದುಕೊಂಡು ಬಂದಿದ್ದರು. ಬಳಿಕ ತಾವು ಕರೆದುಕೊಂಡು ಬಂದಿದ್ದೀರಿ, ಪರವಾಗಿಲ್ಲ. ಆದರೆ ಆ ಬಳಿಕ ತಮ್ಮ ಕಾರು ಪಡುಬಿದ್ರೆ, ಮರೋಳಿ, ಉಡುಪಿಗೂ ಹೋಗಿ ಹಲವರನ್ನು ಕರೆದುಕೊಂಡು ಬಂದು ಬಿಟ್ಟಿದೆಯಲ್ಲ ಎಂದು ಯು.ಟಿ.ಖಾದರ್ ಮಾತಿಗೆ ತಿರುಗೇಟು ನೀಡಿದರು. ಇದಕ್ಕೆ ಸುಮ್ಮನೆ ಆರೋಪ ಮಾಡಬೇಡಿ ಎಂದು ಯು.ಟಿ.ಖಾದರ್ ಕಿಡಿಕಾರಿದ್ದಾರೆ. ಆ ಸಂದರ್ಭ ತಮ್ಮಲ್ಲಿ ಅದಕ್ಕೆ ದಾಖಲೆಗಳಿವೆ ಎಂದು ವೇದವ್ಯಾಸ ಕಾಮತ್ ಹೇಳಿದ್ದಾರೆ. ಪರಿಣಾಮ ರೊಚ್ಚಿಗೆದ್ದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಬಿಜೆಪಿ ಶಾಸಕರು ಜಲ್ಲಿ ಮತ್ತು ಕಲ್ಲು ಸಾಗಾಟಕ್ಕೆ ಲಾರಿ ಹಾಗೂ ಡ್ರೈವರ್ಗಳಿಗೆ ಅನುಮತಿ ಪತ್ರ ನೀಡಿರೋದು ಎಷ್ಟು ಸರಿ ಎಂದು ವಾದಿಸಿದ್ದಾರೆ. ತಕ್ಷಣ ಮಧ್ಯ ಪ್ರವೇಶಿಸಿದ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಎರಡೂ ಕಡೆಯವರನ್ನು ಸಮಾಧಾನ ಮಾಡಿದ್ದಾರೆ.