ಮಂಗಳೂರು: ನಗರದ ಗರೋಡಿಯಲ್ಲಿ ರಿಕ್ಷಾದಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ಶೀಘ್ರದಲ್ಲೇ ಎನ್ಐಎಗೆ ಹಸ್ತಾಂತರಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಪ್ರಕರಣದ ಹಿನ್ನೆಲೆ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಘಟನೆ ನಡೆದ ಆರಂಭದಿಂದಲೇ ಎನ್ಐಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದ ಇತರ ಇಲಾಖೆಗಳು ತನಿಖೆಯಲ್ಲಿ ಕೈ ಜೋಡಿಸಿದೆ. ಪ್ರಕರಣದ ಪ್ರಾರಂಭಿಕ ತನಿಖೆಯನ್ನು ರಾಜ್ಯ ಪೊಲೀಸರು ಮಾಡುತ್ತಿದ್ದಾರೆ. ಎನ್ಐಎಗೆ ವಹಿಸುವ ಬಗ್ಗೆ ಶೀಘ್ರ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದರು.
ಸಾಕ್ಷ್ಯಾಧಾರಗಳ ಸಂಗ್ರಹ: ದೇಶದ ಏಕತೆಗೆ ಭಂಗ ತರುವ ಮತಾಂಧ ಶಕ್ತಿಗಳನ್ನು ಮೂಲೋತ್ಪಾಟನೆ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು. ಇಂದು ಘಟನಾಸ್ಥಳಕ್ಕೆ ಮತ್ತು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಆರೋಪಿ ಶಾರೀಕ್ಗೆ ಬ್ಯಾಕ್ ಗ್ರೌಂಡ್ನಲ್ಲಿ ಸಹಕಾರ ನೀಡುತ್ತಿದ್ದವರ, ಹಣಕಾಸು ವ್ಯವಸ್ಥೆ ಮಾಡುವ ಶಕ್ತಿಗಳ ಬಗ್ಗೆ ಗಮನ ತೆಗೆದುಕೊಳ್ಳಲಾಗುವುದು.
ಆರೋಪಿ ಶಾರೀಕ್ಗೆ ಶಿಕ್ಷೆಯಾಗುವ ನಿಟ್ಟಿನಲ್ಲಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗುತ್ತದೆ. ಆರೋಪಿ ಹುಷಾರಾಗಿ ಹೊರಬಂದರೆ ಸಾಕಷ್ಟು ಮಾಹಿತಿಗಳು ಲಭ್ಯವಾಗಲಿದೆ. ಆರೋಪಿಗೆ ಮತ್ತು ರಿಕ್ಷಾ ಚಾಲಕನಿಗೆ 8 ಜನ ವಿಶೇಷ ತಜ್ಞ ವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತದೆ ಎಂದರು.
ಹಿಂದೂ ಎಂಬಂತೆ ಬಿಂಬಿಸಿದ್ದ: ಮೊಬೈಲ್ ರಿಪೇರಿ ಕಲಿತಿದ್ದ, ಹಿಂದೂ ಎಂಬಂತೆ ಬಿಂಬಿಸಿದ್ದ ಆರೋಪಿ ಶಾರೀಕ್ಗೆ ಮಂಗಳೂರಿನ ಗೋಡೆ ಬರಹ ಪ್ರಕರಣದಲ್ಲಿ ಹೈಕೋರ್ಟ್ ಜಾಮೀನು ನೀಡಿತ್ತು. ಆ ಬಳಿಕ ಆತನ ಮೇಲೆ ನಿಗಾ ಇಡಲಾಗಿತ್ತು. ಆತ ಕೆಲ ಸಮಯ ತೀರ್ಥಹಳ್ಳಿಯ ಅಂಗಡಿಯಲ್ಲಿದ್ದ. ಆದರೆ, ಒಂದು ದಿನ ಏಕಾಏಕಿ ನಾಪತ್ತೆಯಾಗಿದ್ದ. ಆತನನ್ನು ಹುಡುಕುವ ಕೆಲಸ ಮಾಡಿದ್ದರು. ಆದರೆ, ಆತ ಪೊಲೀಸರಿಗೆ ಸಿಕ್ಕಿರಲಿಲ್ಲ. ಅಲ್ಲಿಂದ ತಪ್ಪಿಸಿಕೊಂಡ ಬಳಿಕ ಶಾರೀಕ್ ಹಿಂದೂ ಹೆಸರಿನಲ್ಲಿ ಓಡಾಡಿಕೊಂಡಿದ್ದ.
ಐಡಿ ಕಾರ್ಡ್ ಕಳ್ಳತನ ಮಾಡಿ ಹಿಂದೂಗಳ ಹೆಸರಿನಲ್ಲಿ ಓಡಾಡುತ್ತಿದ್ದ. ಆ ಬಳಿಕ ಇವನು ಮೊಬೈಲ್ ಬಳಸುತ್ತಿರಲಿಲ್ಲ. ಸಂಪರ್ಕಕ್ಕೆ ಬೇರೆಯೆ ವಿಧಾನ ಬಳಸುತ್ತಿದ್ದ. ಇವನನ್ನು ಯಾರು ಸಂಶಯಪಡುತ್ತಿರಲಿಲ್ಲ. ಈತ ಕೊಚ್ಚಿನ್, ಕೊಯಮತ್ತೂರು, ಕನ್ಯಾಕುಮಾರಿ ಮೊದಲಾದೆಡೆ ಹೋಗಿ ಬಂದಿದ್ದ ಎಂದರು. ಇದೇ ವೇಳೆ, ಮಂಗಳೂರಿನಲ್ಲಿ ಎನ್ಐಎ ಘಟಕ ಸ್ಥಾಪಿಸುವ ಬಗ್ಗೆಗೂ ಮಾಹಿತಿ ನೀಡಿದರು.
ಹಣದ ಮೂಲ ಪತ್ತೆ ಕಾರ್ಯ ನಡೆಯುತ್ತಿದೆ; ಡಿಜಿಪಿ ಪ್ರವೀಣ್ ಸೂದ್ ಮಾತನಾಡಿ, ಆರೋಪಿಗೆ ಹಣ ಎಲ್ಲಿಂದ ಬರ್ತಾ ಇದೆ. ಅದರ ಹಿಂದೆ ಯಾರಿದ್ದಾರೆ ಎಂಬ ಶೋಧಕಾರ್ಯ ನಡೆಯುತ್ತಿದೆ. ಆರೋಪಿಯ ಪ್ರಾಣ ಉಳಿಸಬೇಕು. ಆ ಬಳಿಕ ಆತನ ವಿಚಾರಣೆ ನಡೆಸಿ ಸಂಚು ಬಗ್ಗೆ ತಿಳಿಯಬೇಕು. ಈತನಿಗೆ ಸಮುದಾಯಗಳ ಮಧ್ಯೆ ವೈಮನಸ್ಸು ಸೃಷ್ಟಿಸುವ ಉದ್ದೇಶ ಇತ್ತು ಎಂದರು.
ಮಂಗಳೂರು ಕಮೀಷನರ್ ಶಶಿಕುಮಾರ್ ಮಾತನಾಡಿ, ಈ ಪ್ರಕರಣ ಸಂಬಂಧ ಬೆಂಗಳೂರು, ಶಿವಮೊಗ್ಗ, ಮೈಸೂರು ಸೇರಿದಂತೆ ಎಂಟು ಕಡೆ ದಾಳಿ ನಡೆಸಲಾಗಿದೆ. ನಾಲ್ಕು ಮಂದಿಯನ್ನು ತನಿಖೆಗಾಗಿ ವಶಕ್ಕೆ ಪಡೆಯಲಾಗಿದೆ. ಅವರನ್ನು ಆರೋಪಿಗಳೆಂದು ಪರಿಗಣಿಸಿಲ್ಲ. ಯಾರನ್ನು ಈವರೆಗೆ ಬಂಧಿಸಿಲ್ಲ ಎಂದು ತಿಳಿಸಿದರು.
ಸಂತ್ತಸ್ತನಿಗೆ 50 ಸಾವಿರ ಪರಿಹಾರ: ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಕುಕ್ಕರ್ ಬಾಂಬ್ ಸ್ಫೋಟದ ಸಂತ್ರಸ್ತ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಮ್ಮ ವೈಯಕ್ತಿಕ ನಿಧಿಯಿಂದ 50 ಸಾವಿರ ಪರಿಹಾರ ನೀಡಿದರು. ರಿಕ್ಷಾ ಚಾಲಕನ ಚಿಕಿತ್ಸಾ ವೆಚ್ಚ ಸರ್ಕಾರದಿಂದ ಭರಿಸಲಾಗುವುದು ಮತ್ತು ಸರ್ಕಾರದಿಂದ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಅವಾಚ್ಯ ಪದ ಬಳಕೆ ಆರೋಪ: ಮಾಜಿ ಸಿಎಂ ಕುಮಾರಸ್ವಾಮಿ ಸ್ಪಷ್ಟನೆ