ಪುತ್ತೂರು : ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆಡಳಿತ ಮಂಡಳಿ ಹಾಗೂ ಪ್ರಾಂಗಣದ ವರ್ತಕರ ಸಹಯೋಗದಲ್ಲಿ ಆವರಣ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಸ್ವಚ್ಛತಾ ಆಂದೋಲನಕ್ಕೆ ಎಪಿಎಂಸಿ ನಿಕಟಪೂರ್ವ ಅಧ್ಯಕ್ಷರು, ಹಾಲಿ ಸದಸ್ಯರಾಗಿರುವ ಬೂಡಿಯಾರ್ ರಾಧಾಕೃಷ್ಣ ರೈ ಚಾಲನೆ ನೀಡಿದ್ರು. ನಂತರ ಮಾತನಾಡಿದ ಅವರು, ಎಪಿಎಂಸಿ ವರ್ತಕರು ಆಡಳಿತ ಮಂಡಳಿ ಹಾಗೂ ವರ್ತಕರು ನಡುವೆ ಉತ್ತಮ ಬಾಂಧವ್ಯದಿಂದ ವ್ಯವಹಾರ ನಡೆಯುತ್ತಿದೆ. ಇಲ್ಲಿ ನಡೆಯುವ ಯಾವುದೇ ಕಾರ್ಯಕ್ರಮದಲ್ಲಿ ವರ್ತಕರ ಪಾತ್ರ ಮುಂಚೂಣಿಯಲ್ಲಿದೆ.
ಕೊಂಕಣ್ ರೈಲ್ವೆ ಮೂಲಕ ಹೊರ ರಾಜ್ಯಗಳಿಗೆ ಅಡಿಕೆ ಸಾಗಾಟದಲ್ಲೂ ಉತ್ತಮ ಸಹಕಾರ ದೊರೆತಿದೆ. ವರ್ತಕರು ತಮ್ಮ-ತಮ್ಮ ಅಂಗಡಿ ಪ್ರಾಂಗಣವನ್ನು ಶುಚಿಯಾಗಿಟ್ಟುಕೊಳ್ಳುವ ಮುಖಾಂತರ ಸ್ವಚ್ಛತಾ ಆಂದೋಲನ ಪರಿಕಲ್ಪನೆ ಎಪಿಎಂಸಿಯ ಮೂಲಕ ಅರಿವಾಗಬೇಕು, ಸ್ಚಚ್ಛತೆಯಲ್ಲಿ ಪುತ್ತೂರು ಎಪಿಎಂಸಿಯು ಮಾದರಿಯಾಗಬೇಕು ಎಂದರು. ಅಧ್ಯಕ್ಷ ದಿನೇಶ್ ಮೆದು ಮಾತನಾಡಿ, ಉತ್ತಮ ಆರೋಗ್ಯಕ್ಕೆ ಶುಚಿತ್ವ ಮುಖ್ಯ. ಪ್ರತಿ ವರ್ಷ ಗಾಂಧಿ ಜಯಂತಿ ದಿನ ಸ್ವಚ್ಛತಾ ಆಂದೋಲನ ನಡೆಸಲಾಗುತ್ತಿತ್ತು. ಆದರೆ, ಅ.3ರಂದು ಬೃಹತ್ ಮಟ್ಟದ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಸ್ವಚ್ಛತಾ ಆಂದೋಲನ ನಡೆಸಲಾಗುತ್ತಿದೆ ಎಂದು ತಿಳಿಸಿದ್ರು.
ರೈಲು ಮುಖಾಂತರ ಉತ್ತರ ಭಾಗದ ರಾಜ್ಯಗಳಿಗೆ ಅಡಿಕೆ ಸಾಗಾಟ ಮಾಡುತ್ತಿರುವುದು ಪುತ್ತೂರು ಎಪಿಎಂಸಿಯು ರಾಜ್ಯದಲ್ಲೇ ಪ್ರಥಮವಾಗಿದೆ. 2ನೇ ಹಂತವಾಗಿ ಮುಂದಿನ ವಾರ ಚಾಲನೆ ನೀಡಲಾಗುವುದು. ಅಕ್ಟೋಬರ್ 3ರಂದು ನಡೆಯುವ ಕಾರ್ಯಕ್ರಮದಲ್ಲಿ ಅಧಿಕೃತ ಚಾಲನೆ ನೀಡಲಾಗುವುದು ಎಂದರು. ವರ್ತಕ ಪ್ರತಿನಿಧಿ ಅಬ್ದುಲ್ ಶಕೂರ್ ಹಾಜಿ, ಎಪಿಎಂಸಿ ಉಪಾಧ್ಯಕ್ಷ ಮಂಜುನಾಥ ಎನ್ ಎಸ್ ನಿರ್ದೇಶಕ ಬಾಲಕೃಷ್ಣ ಬಾಣಜಾಲು, ಯಾರ್ಡ್‌ನ ವರ್ತಕರು, ಎಪಿಎಂಸಿ ಸಿಬ್ಬಂದಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.