ಸುಳ್ಯ(ದಕ್ಷಿಣ ಕನ್ನಡ): ಈಗಾಗಲೇ ಸ್ಟೆನ್ಸಿಲ್ ಆರ್ಟ್, ಫ಼ೈರ್ ಆರ್ಟ್ ಚಿತ್ರಕಲೆಯಲ್ಲಿ ಹಲವಾರು ಸಾಧನೆಗಳನ್ನು ಮಾಡಿ ದಾಖಲೆ ಸೃಷ್ಟಿಸಿರುವ ಕಡಬ ತಾಲೂಕಿನ ನೆಲ್ಯಾಡಿ ನಿವಾಸಿ ಪರೀಕ್ಷಿತ್ ಅವರು ತನ್ನ ಗೆಳೆಯರೊಂದಿಗೆ ಸೇರಿ ಇನ್ನೊಂದು ಅಭೂತಪೂರ್ವವಾದ ಚಿತ್ರಕಲೆ ಮಾಡಿ ವಿಶ್ವದಾಖಲೆಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಯುವ ಕಲಾವಿದ ಪರೀಕ್ಷಿತ್ ಹಾಗೂ ಗೆಳೆಯರಾದ ಚಾರ್ಲ್ಸ್ ಕೆ. ಸಿ ಇಚಿಲಂಪಾಡಿ ಹಾಗೂ ಮೊಹಮ್ಮದ್ ಮನ್ಸೂರು ಹೊಸಮಜಲು, ಕೌಕ್ರಾಡಿ ಇವರೊಂದಿಗೆ ಸೇರಿಕೊಂಡು ಏಕಕಾಲದಲ್ಲಿ ಎರಡೂ ಕೈಗಳನ್ನು ಬಳಸಿ ಮಹಾತ್ಮಗಾಂಧಿ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರವನ್ನು ಅರಳಿಸಿದ್ದಾರೆ. ಪೋರ್ಟ್‌ರೈಟ್ ಪೇಪರ್ ಕಟ್ಟಿಂಗ್ ಚಿತ್ರಕಲೆಯಲ್ಲಿ ಬಳಸಿ ಭಾವಚಿತ್ರಗಳನ್ನು ರಚಿಸಿ ಹೊಸದೊಂದು ವಿಶ್ವದಾಖಲೆ ಮಾಡಿದ್ದಾರೆ. ಇದಕ್ಕಾಗಿ ವರ್ಲ್ಡ್ ರೆಕಾರ್ಡ್ ಇಂಡಿಯಾದವರು ಮ್ಯಾಕ್ಸಿಮಮ್ ಮೊಸಾಯಿಕ್ ಪೋರ್ಟ್‌ರೈಟ್ ಯೂಸಿಂಗ್ ಪೇಪರ್ ಕಟ್ಟಿಂಗ್ಸ್ ಆರ್ಟ್ ಎನ್ನುವ ಹೊಸ ವಿಶ್ವದಾಖಲೆ ನೀಡಿದ್ದಾರೆ.
ಪರೀಕ್ಷಿತ್ ಹಾಗೂ ಅವರ ಸ್ನೇಹಿತರು ತಮ್ಮ ವಿದ್ಯಾಭ್ಯಾಸದೊಂದಿಗೆ ಈ ಚಿತ್ರಕಲೆಯನ್ನು ರೂಢಿಸಿಕೊಂಡು ಒಂದರ ನಂತರ ಒಂದು ಪ್ರಯೋಗ ಮಾಡಿ ಸಾಧನೆಯೆಡೆಗೆ ಹೆಜ್ಜೆ ಇಡುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿದ್ದು, ತಮ್ಮದೇ ಗ್ರಹಿಕೆಯ ಹಾಗೂ ಕೌಶಲ್ಯತೆ ಮೂಲಕ ಈ ಕಲೆಯನ್ನು ಕರಗತ ಮಾಡಿಕೊಂಡಿರುವ ಈ ಕಲೆಗಾರರ ತಂಡವು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.