ಬೆಳ್ತಂಗಡಿ: ತಾಲೂಕಿನ ಕೊಕ್ಕಡ ಸಮೀಪದ ಪಿಜಿನಡ್ಕದಲ್ಲಿ ಮನೆ ಹಾಗೂ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ 3 ಕ್ವಿಂಟಲ್‌ಗೂ ಅಧಿಕ ರಬ್ಬರ್ ಶೀಟ್, ಮನೆಯ ಅಗತ್ಯ ದಾಖಲೆ ಪತ್ರಗಳು ಹಾಗೂ ನಗದು ಬೆಂಕಿಗಾಹುತಿಯಾದ ಘಟನೆ ಜ.13 ರಂದು ಬೆಳಗ್ಗೆ ನಡೆದಿದೆ.
ಕೊಕ್ಕಡ ಗ್ರಾಮದ ಪಿಜಿನಡ್ಕ ಪಿ.ಕೆ ಚೀಂಕ್ರರವರು ಮನೆಯಲ್ಲಿ ಈ ಅವಘಡ ಸಂಭವಿಸಿದೆ. ಇವರು ಹೊಸಮನೆ ಕಟ್ಟುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಹೊಸ ಮನೆಯಲ್ಲಿಯೇ ಇರುತ್ತಿದ್ದ ಮನೆ ಮಂದಿ ಅಡುಗೆ ಮಾತ್ರ ಹಳೆ ಮನೆಯಲ್ಲಿ ಮಾಡುತ್ತಿದ್ದರು. ಹಳೆ ಮನೆಗೆ ತಾಗಿಕೊಂಡೇ ಕೊಟ್ಟಿಗೆ ಇದ್ದು, ಮನೆ ವಸ್ತುಗಳನ್ನು ಅದರಲ್ಲಿಯೇ ಜೋಡಿಸಿಡಲಾಗಿತ್ತು. ಅಲ್ಲದೇ ಮನೆಯೊಳಗಡೆ ರಬ್ಬರ್ ಶೀಟ್‌ನ ದಾಸ್ತಾನು, ಮನೆಯವರ ದಾಖಲೆ ಪತ್ರಗಳು ಇದ್ದವು. ಅಡುಗೆ ಕೋಣೆಯಲ್ಲಿ ರಬ್ಬರ್ ಶೀಟ್ನ್ನು ಕೂಡ ಒಣಗಲು ಹಾಕಿದ್ದರು.
ಎಂದಿನಂತೆ ಬೆಳಗ್ಗೆ 6 ಗಂಟೆಯ ನಂತರ ಅಡುಗೆ ಕೆಲಸ ಮಾಡುತ್ತಿದ್ದರು. ಮನೆ ಮಂದಿ ಹೊಸಮನೆಯಲ್ಲಿದ್ದರು. 7 ಗಂಟೆಯ ಹೊತ್ತಿಗೆ ಬೆಂಕಿ ಹಿಡಿದು ಮನೆಯ ಹೆಂಚು ಹಾಗೂ ಶೀಟ್ ಒಡೆಯುವ ಸದ್ದು ಕೇಳಿ ಹೊರಗೆ ಬಂದು ನೋಡಿದಾಗ ರಬ್ಬರ್ ಶೀಟ್‌ಗೆ ತಗುಲಿದ ಬೆಂಕಿ ಮನೆಯನ್ನು ಸಂಪೂರ್ಣವಾಗಿ ಆವರಿಸಿತ್ತು.
ಕೂಡಲೇ ಅಕ್ಕ ಪಕ್ಕದವರು ಸೇರಿ ಬೆಂಕಿ ನಂದಿಸುವ ಕಾರ್ಯ ನಡೆಸಿದರು. ಅದಾಗಲೇ 3 ಕ್ವಿಂಟಾಲ್‌ಗೂ ಅಧಿಕ ರಬ್ಬರ್ ಶೀಟ್, ಅಗತ್ಯ ದಾಖಲೆ ಪತ್ರಗಳು ಹಾಗೂ ಬ್ಯಾಗ್ನಲ್ಲಿದ್ದ 30 ಸಾವಿರ ರೂ. ನಗದು ಸೇರಿ ಸುಮಾರು 1.50 ಲಕ್ಷ ರೂ ನಷ್ಟ ಉಂಟಾಗಿರಬಹುದೆಂದು ಅಂದಾಜಿಸಲಾಗಿದೆ.