ಈಶ್ವರಮಂಗಲ(ದಕ್ಷೀಣ ಕನ್ನಡ): ಈಶ್ವರಮಂಗಲದ ಹನುಮಗಿರಿಯ ಶ್ರೀ ಪಂಚಮುಖಿ ಆಂಜನೇಯ ಕ್ಷೇತ್ರ, ಶ್ರೀ ಕೋದಂಡರಾಮನ ಸನ್ನಿಧಿಯಾಗಿರುವ ಅಮರಗಿರಿಯಲ್ಲಿ ನಿರ್ಮಾಣಗೊಂಡಿರುವ ಶ್ರೀ ಭಾರತಿ ಅಮರಜ್ಯೋತಿ ಮಂದಿರ ಥೀಮ್ ಪಾರ್ಕ್ ಅನ್ನು ಲೋಕಾರ್ಪಣೆ ಮಾಡಲು ರಾಜಕೀಯ ಚಾಣಕ್ಯ ಖ್ಯಾತಿಯ ಕೇಂದ್ರ ಗೃಹಮಂತ್ರಿ ಅಮಿತ್ ಶಾ ಆಗಮಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ಈಶ್ವರಮಂಗಲ ಹಾಗೂ ಹನುಮಗಿರಿ ಸುತ್ತಮುತ್ತ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿದ್ದು, ಮಾಧ್ಯಮಕ್ಕೆ ಸೇರಿದಂತೆ ಸ್ಥಳೀಯರಿಗೂ ನಿರ್ಬಂಧ ವಿಧಿಸಲಾಗಿತ್ತು. ಈಶ್ವರಮಂಗಲ, ಹನುಮಗಿರಿ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ಹನುಮಗಿರಿಗೆ ಹೋಗುವ ಪ್ರವೇಶ ದ್ವಾರದಿಂದಲೇ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಸ್ಥಳದಲ್ಲಿ ಎಸ್.ಪಿ ಸಹಿತ ಉನ್ನತ ಪೊಲೀಸ್ ಅಧಿಕಾರಿಗಳ ತಂಡದಿಂದ ಬಂದೋಬಸ್ತ್ ಏರ್ಪಡಿಸಲಾಗಿದೆ.
ಹನುಮಗಿರಿಯ ಶ್ರೀ ಗಜಾನನ ವಿದ್ಯಾಸಂಸ್ಥೆಯ ಆವರಣದಲ್ಲಿ ನಿರ್ಮಿಸಿರುವ ಹೆಲಿಪ್ಯಾಡ್‌ಗೆ ಬಂದಿಳಿದ ಶಾ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಸೇರಿ ಪ್ರಮುಖರು ಬರಮಾಡಿಕೊಂಡರು. ಶ್ರೀ ಪಂಚಮುಖಿ ಆಂಜನೇಯ ಸ್ವಾಮಿಯ ದರ್ಶನ ಮಾಡಿದ ನಂತರ ಅಮರಗಿರಿಗೆ ಆಗಮಿಸಿದ ಶಾ ಅವರು ಶ್ರೀ ಭಾರತಿ ಅಮರಜ್ಯೋತಿ ಮಂದಿರವನ್ನು ಲೋಕಾರ್ಪಣೆ ಮಾಡಿದರು. ಅಲ್ಲಿಂದ ಮತ್ತೆ ಪುತ್ತೂರಿಗೆ ಹೆಲಿಕ್ಯಾಪ್ಟರ್ನಲ್ಲಿ ಪ್ರಯಾಣ ಬೆಳೆಸಿದ್ದಾರೆ.
ಕ್ಯಾಂಪ್ಕೋ ಸುವರ್ಣ ವರ್ಷಾಚರಣೆ: ಪುತ್ತೂರಿನ ಕ್ಯಾಂಪ್ಕೋದ ಸುವರ್ಣ ವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ಆಡಳಿತ ಕಾಲದಲ್ಲಿ ಪಿಎಫ್‌ಐನ 1,700 ಸದಸ್ಯರನ್ನು ಬಿಡುಗಡೆ ಮಾಡಿತ್ತು. ನರೇಂದ್ರ ಮೋದಿ ಆಳ್ವಿಕೆಯಲ್ಲಿ ಬಿಜೆಪಿ ಸರ್ಕಾರ ಪಿಎಫ್‌ಐ ನಿಷೇಧಿಸಿದೆ. ಪಿಎಫ್‌ಐನ್ನು ಸಂಪೂರ್ಣವಾಗಿ ನಿಷೇಧಿಸುವಲ್ಲಿ ಕೇಂದ್ರ ಕ್ರಮ ಕೈಗೊಳ್ಳುತ್ತಿದೆ. ಕಾಂಗ್ರೆಸ್ ರಾಷ್ಟ್ರ ವಿರೋಧಿ ಅಂಶಗಳಿಗೆ ಬೆಂಬಲಿಸುತ್ತದೆ. ರಾಷ್ಟ್ರ ವಿರೋಧಿ ಸಂಘಟನೆಗಳಿಗೆ ಬೆಂಬಲಿಸುವ ಕಾಂಗ್ರೆಸ್ ಪಕ್ಷದಿಂದ ಕರ್ನಾಟಕವನ್ನು ರಕ್ಷಿಸಲು ಸಾಧ್ಯವೇ ಇಲ್ಲ ಎಂದಿದ್ದಾರೆ.
ಕೇರಳ ದಕ್ಷಿಣ ಕನ್ನಡಕ್ಕೆ ಸಮೀಪದಲ್ಲಿದೆ. ಕರ್ನಾಟಕ ಕೇರಳದೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಕರ್ನಾಟಕವನ್ನು ಸುರಕ್ಷಿತವಾಗಿಡಬೇಕಾದರೆ ಬಿಜೆಪಿಯಿಂದ ಮಾತ್ರ ಸಾಧ್ಯ. ಪ್ರಧಾನಿ ಮೋದಿ ನೇತೃತ್ವದ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಮಾತ್ರ ಈ ರೀತಿಯ ನಡೆಯನ್ನು ತೆಗೆದು ಕೋಳ್ಳಲು ಸಾಧ್ಯ ಎಂದು ಹೇಳುವ ಮೂಲಕ ಕೇರಳದ ಪಿಣರಾಯ್ ವಿಜಯನ್ ಅವರಿಗೂ ಟಾಂಗ್ ನೀಡಿದರು.
ಈ ಬಾರಿ ಮಂಡಿಸಲಾದ ಬಜೆಟ್ನಲ್ಲಿ ಪ್ರತಿ ಪಂಚಾಯತ್‌ನಲ್ಲಿ ಪ್ರಾಥಮಿಕ ಕೃಷಿ ಕ್ರೆಡಿಟ್ ಸೊಸೈಟಿ ಸ್ಥಾಪಿಸಲು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ. 3 ವರ್ಷಗಳಲ್ಲಿ ಭಾರತದಲ್ಲಿ 2 ಲಕ್ಷ ಹೊಸ ಪ್ರಾಥಮಿಕ ಕೃಷಿ ಕ್ರೆಡಿಟ್ ಸೊಸೈಟಿಯನ್ನು ಸ್ಥಾಪಿಸಲಾಗುವುದು. ಪ್ರತಿ ಪಂಚಾಯತ್‌ಗೆ ಒಂದು ಪ್ರಾಥಮಿಕ ಕೃಷಿ ಕ್ರೆಡಿಟ್ ಸೊಸೈಟಿ ಇರಲಿದೆ ಎಂದು ಬಜೆಟ್ ಬಗ್ಗೆಯೂ ಈ ವೇಳೆ ಪ್ರಸ್ತಾಪಿಸಿದರು.
ಇದನ್ನೂ ಓದಿ: ನಾಳೆ ಮಂಗಳೂರಿಗೆ ಅಮಿತ್ ಶಾ; ಕೇಂದ್ರ ಗೃಹ ಸಚಿವರ ರೋಡ್ ಶೋ ರದ್ದು, ಕೋರ್ ಕಮಿಟಿ ಸಭೆ ಮಾತ್ರ