ಪುತ್ತೂರು: ನಗರದ ಪ್ರಮುಖ ವೃತ್ತವಾಗಿರುವ ದರ್ಬೆ ವೃತ್ತಕ್ಕೆ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಹೆಸರು ಇಡುವ ಮೂಲಕ ಭಾರತದ ಸಂವಿಧಾನ ಕರ್ತೃಗೆ ನಿಜವಾದ ಅರ್ಥದಲ್ಲಿ ಗೌರವ ಸಲ್ಲಿಸಬೇಕು ಎಂದು ಬಹುಜನ ಒಕ್ಕೂಟ ಹೋರಾಟ ಸಮಿತಿ ಅಧ್ಯಕ್ಷ ಬಿ. ಕೆ. ಸೇಸಪ್ಪ ಬೆದ್ರಕಾಡು ಅವರು ಒತ್ತಾಯಿಸಿದರು.
ಗುರುವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಪುತ್ತೂರು ನಗರದ ಕೇಂದ್ರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣವಾಗಿಲ್ಲ. ಮಿನಿ ವಿಧಾನಸೌಧ ಎದುರು ಅಂಬೇಡ್ಕರ್ ಪುತ್ಥಳಿ ನಿರ್ಮಾಣದ ಮನವಿಗೆ ಬೆಲೆ ಸಿಕ್ಕಿಲ್ಲ. ಪ್ರತಿ ಹಂತದಲ್ಲೂ ಅಂಬೇಡ್ಕರ್ ಪುತ್ಥಳಿ, ಹೆಸರು ಇಡುವಾಗ ತಡೆ ಒಡ್ಡುವ ಷಡ್ಯಂತ್ರ ನಡೆಸಲಾಗುತ್ತಿದೆ. ಅಂಬೇಡ್ಕರ್ ಪುತ್ಥಳಿ ನಿರ್ಮಾಣ, ಅಂಬೇಡ್ಕರ್ ತಾಲೂಕು ಸಭಾಭವನ, ದರ್ಬೆ ವೃತ್ತಕ್ಕೆ ಹೆಸರು ಇಡುವ ವಿಚಾರಗಳಿಗೆ ಸಂಬಂಧಿಸಿ ಅಧಿಕಾರಿ ವರ್ಗವೂ ಬೆಂಬಲ ನೀಡುತ್ತಿಲ್ಲ ಎಂದು ಅವರು ಆರೋಪಿಸಿದರು.
ಕೋಚಣ್ಣ ರೈ ವಿರೋಧಿಗಳು:
ದರ್ಬೆ ವೃತ್ತಕ್ಕೆ ಅಂಬೇಡ್ಕರ್ ಹೆಸರು ಇಡಬೇಕು ಎಂದು ಕಳೆದ 4 ತಿಂಗಳ ಹಿಂದೆ ನಗರಸಭೆ ಮತ್ತು ಶಾಸಕರಿಗೆ ಮನವಿ ಪತ್ರ ನೀಡಲಾಗಿದೆ. ಇದರಿಂದ ದಲಿತ ವರ್ಗವನ್ನು ಕೋಚಣ್ಣ ರೈ ಅವರ ವಿರೋಧಿಗಳೆಂದು ಹಣೆಪಟ್ಟಿ ನೀಡುವ ಕೆಲಸ ನಡೆಯುತ್ತಿದೆ. ನಾವು ಕೋಚಣ್ಣ ರೈ ಅವರ ವಿರೋಧಿಗಳಲ್ಲ. ಅವರ ಹೆಸರನ್ನೂ ಬೇರೆ ಕಡೆಗಳಿಗೆ ಇಡುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ದರ್ಬೆ ವೃತ್ತಕ್ಕೆ ಅಂಬೇಡ್ಕರ್ ಹೆಸರು ಸೂಕ್ತವಾಗಿದ್ದು, ನಗರಸಭೆ ಇದಕ್ಕೆ ಸ್ಪಂಧಿಸದಿದ್ದರೆ ಫೆ.24 ರಂದು ದರ್ಬೆ ವೃತ್ತದಲ್ಲಿ ಬಹುಜನ ಒಕ್ಕೂಟ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಸಲಾಗುವುದು. ಇದಕ್ಕೆ ಅಧಿಕಾರಿ ವರ್ಗದಿಂದ ಪೂರಕವಾದ ಬೆಂಬಲ ಸಿಗದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ತಿಳಿಸಿದರು.