ಮಂಗಳೂರು: ಹಿಂದಿನ ಸಿಸಿಬಿ ಅಧಿಕಾರಿ ಹಾಗೂ ಸಿಬ್ಬಂದಿ ಬಳಸಿಕೊಂಡು ಹಣದ ವ್ಯವಹಾರ ನಡೆಸಿರುವ ಆರೋಪವನ್ನು ಎಡಿಜಿಪಿ ಸೂಚನೆ ಮೇರೆಗೆ ನಡೆಸಿದ ವಿಚಾರಣೆಯ ಮಧ್ಯಂತರ ವರದಿ ಪೊಲೀಸ್ ಆಯುಕ್ತರಿಗೆ ಸಲ್ಲಿಕೆಯಾಗಿ, ಅಲ್ಲಿಂದ ಎಡಿಜಿಪಿಗೆ ವರದಿ ಸಲ್ಲಿಕೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ವ್ಯಕ್ತವಾಗಿರುವ, ಆರೋಪವನ್ನು ಅನುಸರಿಸಿ ವಿಚಾರಣಾಧಿಕಾರಿಗಳು ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಹಣದ ವಹಿವಾಟು ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವುದು ವಿಚಾರಣಾಧಿಕಾರಿಗಳಿಗೆ ತಿಳಿದುಬಂದಿದೆ ಎನ್ನಲಾಗಿದೆ.
ಎಡಿಜಿಪಿಯವರು ವಾರದೊಳಗೆ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ವಿಚಾರಣಾಧಿಕಾರಿ ವಿನಯ ಗಾಂವ್ಕರ್ ನಗರ ಪೊಲೀಸ್ ಕಮಿಷನರ್‌ಗೆ ಮಧ್ಯಂತರ ವರದಿ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿಂದು 366 ಮಂದಿಗೆ ಸೋಂಕು ದೃಢ: 2 ಸೋಂಕಿತರು ಬಲಿ
ಪೊಲೀಸರನ್ನು ಬಳಸಿ ಹಣದ ವ್ಯವಹಾರದ ಆರೋಪಕ್ಕೆ ಗುರಿಯಾಗಿರುವ ಹಿಂದಿನ ಸಿಸಿಬಿ ಅಧಿಕಾರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡುವ ಸಂಭವ ಇದೆ. ಈಗಾಗಲೇ ಸಲ್ಲಿಸಿರುವ ಮಧ್ಯಂತರ ವರದಿಯಲ್ಲಿ ಹಿಂದಿನ ಸಿಸಿಬಿ ಅಧಿಕಾರಿ ವಿಚಾರಣೆ ಬಾಕಿ ಇದೆ ಎಂದು ಉಲ್ಲೇಖಿಸಿದೆ ಎನ್ನಲಾಗಿದೆ. ಮಧ್ಯಂತರ ವರದಿ ತಲುಪಿದ ಬಳಿಕ ಎಡಿಜಿಪಿ ನಿರ್ದೇಶನದಂತೆ ಮುಂದಿನ ವಿಚಾರಣೆ ನಡೆಯಲಿದೆ. ಈ ವೇಳೆ ಹಿಂದಿನ ಸಿಸಿಬಿ ಅಧಿಕಾರಿಯನ್ನು ವಿಚಾರಣೆಗೆ ಕರೆಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.