ಮಂಗಳೂರು : ನಂಜನಗೂಡಿನಲ್ಲಿ ಪುರಾತನ ದೇವಾಲಯ ಕೆಡವಿರುವುದರಲ್ಲಿ ರಾಜ್ಯ ಸರಕಾರ ಎಡವಿದೆ. ಆದ್ದರಿಂದ ಅದೇ ಸ್ಥಳದಲ್ಲಿ ಮತ್ತೆ ದೇವಾಲಯ ನಿರ್ಮಾಣ ಮಾಡಬೇಕು ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಆಗ್ರಹಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ಡಾ.ಎಲ್ ಕೆ ಸುವರ್ಣ ಮಾತನಾಡಿ, 800 ವರ್ಷಗಳ ಹಿಂದಿನ ದೇವಾಲಯ ಎಂಬುದು ತಿಳಿದಿದ್ದರೂ ಅದೇ ಸ್ಥಳದಲ್ಲಿ ರಸ್ತೆ ನಿರ್ಮಾಣ ಮಾಡಿರೋದು ತಪ್ಪು. ಅಲ್ಲದೆ ರಸ್ತೆಯನ್ನು ಬೇರೆಡೆಯಿಂದ ಮಾಡಲು ಅವಕಾಶ ಇದ್ದಾಗಲೂ ಈ ರೀತಿ ಮಾಡಿರೋದು ಸರಿಯಲ್ಲ.
ಅಲ್ಲದೆ ಕೆಡುವುವಾಗಲೂ ದೇವಾಲಯದ ಮೂರ್ತಿಗಳಿಗೆ ಭಗ್ನ ಆಗದ ರೀತಿ ಗ್ರಾಮಸ್ಥರ ಮನವೊಲಿಕೆ ಮಾಡಿ ಕೆಲಸ ಮಾಡಬಹುದಿತ್ತು. ಆದರೆ, ಇದಾವುದನ್ನೂ ಮಾಡದೆ ಇಂತಹ ಕೃತ್ಯ ಎಸಗಿರೋದು ತಪ್ಪು ಎಂದರು.
ಇದೀಗ ಅಖಿಲ ಭಾರತ ಹಿಂದೂ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಈ ಬಗ್ಗೆ ಸರಕಾರದೊಂದಿಗೆ, ಮುಜರಾಯಿ ಇಲಾಖೆಯೊಂದಿಗೆ ಮಾತುಕತೆ ನಡೆಸಿದೆ. ಈ ಬಗ್ಗೆ ಸರಕಾರವೂ ನಮಗೆ ಅದೇ ಸ್ಥಳದಲ್ಲಿ ಮತ್ತೆ ದೇವಾಲಯ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದೆ ಎಂದರು.
ಕೆಲ ದಿನಗಳ ಹಿಂದೆ ಸುದ್ದಿಗೋಷ್ಠಿಯಲ್ಲಿ ಸಿಎಂ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಜೈಲು ಪಾಲಾದವರಿಗೂ ಅಖಿಲ ಭಾರತ ಹಿಂದೂ ಮಹಾಸಭಾಕ್ಕೂ ಯಾವುದೇ ಸಂಬಂಧವಿಲ್ಲ. ಮಾಹಿತಿ ಕೊರತೆಯಿಂದ ಈಗಲೂ ಕೆಲ ಮಾಧ್ಯಮಗಳಲ್ಲಿ ಅವರ ಹೆಸರುಗಳ ಮುಂದೆ ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಎಂದು ಉಲ್ಲೇಖಿಸಲಾಗುತ್ತದೆ. ಧರ್ಮೇಂದ್ರ ಹಾಗೂ ರಾಜೇಶ್ ಪವಿತ್ರನ್ ಇವರನ್ನು ಈ ಸಂಘಟನೆಯಿಂದ ಉಚ್ಚಾಟಿಸಲಾಗಿದೆ ಎಂದು ಡಾ.ಎಲ್ ಕೆ ಸುವರ್ಣ ಸ್ಪಷ್ಟಪಡಿಸಿದರು.
ಈಗಲೂ ಅವರುಗಳು ಹಿಂದೂ ಮಹಾಸಭಾದ ಹೆಸರು ಹೇಳಿಕೊಂಡು ತಿರುಗಾಡುತ್ತಾ ಗೊಂದಲ ಸೃಷ್ಟಿಸುತ್ತಿದ್ದಾರೆ. ಈ ಬಗ್ಗೆ ನಾವು ಮಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದೇವೆ ಎಂದರು. ಸಿಎಂ ಅವರನ್ನು ಭೇಟಿಯಾಗಿರುವ ಕ್ರಿಶ್ಚಿಯನ್ ಸಮುದಾಯದ ಬಿಷಪ್ ಅವರು ಮುಖಂಡರೊಂದಿಗೆ ಸೇರಿ ಮತಾಂತರ ಕಾಯ್ದೆ ಜಾರಿಗೊಳಿಸಬಾರದೆಂದು ಮನವಿ ಮಾಡಿದ್ದಾರೆ. ಇದನ್ನು ಅಖಿಲ ಭಾರತ ಹಿಂದೂ ಮಹಾಸಭಾ ತೀವ್ರವಾಗಿ ಖಂಡಿಸುತ್ತದೆ. ರಾಜ್ಯದಲ್ಲಿ ಪ್ರಬಲ ಮತಾಂತರ ವಿರೋಧಿ ಕಾನೂನನ್ನು ಜಾರಿಗೊಳಿಸಬೇಕೆಂದು ಸಿಎಂಗೆ ಈ ಸಂದರ್ಭದಲ್ಲಿ ಅವರು ಒತ್ತಾಯಿಸಿದರು.