ಮಂಗಳೂರು: ಉಳ್ಳಾಲದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸುವ ನಿಟ್ಟಿನಲ್ಲಿ ಉಳ್ಳಾಲ ದರ್ಗಾ ಮತ್ತು ಜಿಲ್ಲಾಡಳಿತದ ವತಿಯಿಂದ ಸರ್ವಧರ್ಮ ಸಮಾಲೋಚನಾ ಸಭೆ ದರ್ಗಾ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಶಾಸಕ ಯು.ಟಿ.ಖಾದರ್ ಮಾತನಾಡಿ, ಕೊರೊನಾ ವೈರಸ್ ಹರಡುವಿಕೆ ಆರಂಭದ ಹಂತದಲ್ಲಿದೆ. ಇದರ ನಿವಾರಣೆ ಸುಲಭದ ಮಾತಲ್ಲ. ಆದರೆ, ನಿಯಂತ್ರಿಸುವ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನ ಮಾಡಬೇಕು. ಆರಂಭದಲ್ಲೇ ಚಿಕಿತ್ಸೆ ಪಡೆಯದೆ ಅಂತಿಮ ಹಂತದಲ್ಲಿ ವೆಂಟಿಲೇಟರ್ಗೆ ಹೋದವರು ಹಿಂದೆ ಬಂದಿರುವುದು ಅಪರೂಪ. ವೈದ್ಯರು ದೇವರಲ್ಲ, ವೈದ್ಯರೇ ಕೊರೊನಾದಿಂದ ಮೃತಪಡುತ್ತಿದ್ದಾರೆ. ಪರಿಸ್ಥಿತಿ ಕೈಮೀರುವ ಮೊದಲೇ ಚಿಕಿತ್ಸೆ ಅಗತ್ಯ. ಉಳ್ಳಾಲದಲ್ಲಿ ಯಾರೂ ಮಾಸ್ಕ್ ಧರಿಸದೆ ಮನೆಯಿಂದ ಹೊರ ಬರಬಾರದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಮಾತನಾಡಿ, ಸದ್ಯ ಉಳ್ಳಾಲದಲ್ಲೇ 12 ಕಂಟೇನ್ಮೆಂಟ್ ವಲಯಗಳಿವೆ. ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಪ್ರಕರಣಗಳು ಕಡಿಮೆಯಿತ್ತು. ಎಲ್ಲಿಂದ ಸೋಂಕು ಬಂದಿದೆ ಎನ್ನುವುದು ಪತ್ತೆ ಹಚ್ಚಲು ಸಾಧ್ಯವಾಗುತ್ತಿತ್ತು. ಈಗ ಹೆಚ್ಚಾಗಿ ಪತ್ತೆ ಸಾಧ್ಯವಾಗದಿದ್ದರೂ, ಜನರಲ್ಲಿ ಭಯ ಬೇಡ. ಯಾಕೆಂದರೆ, ಸೋಂಕಿತರು ಹೆಚ್ಚಾದಂತೆ ಗುಣಮುಖರಾಗುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ನಿಯಮ ಮೀರುವವರ ವಿರುದ್ಧ ಕ್ರಮ ಕೈಗೊಂಡರೂ ಪ್ರಯೋಜನ ಆಗುತ್ತಿಲ್ಲ. ಆದ್ದರಿಂದ ಜನರ ಸಹಕಾರ ಅಗತ್ಯ ಎಂದು ಹೇಳಿದರು.
ಪೆರ್ಮನ್ನೂರು ಚರ್ಚ್ ಧರ್ಮಗುರು ಫಾ.ಡಾ.ಜೆ.ಬಿ.ಸಲ್ದಾನ ಮಾತನಾಡಿ, ಕೊರೊನಾದಿಂದ ಯಾರಾದರೂ ಮೃತಪಟ್ಟರೆ ದಫನ ಪ್ರಕ್ರಿಯೆ ಚಿಂತಾಜನಕವಾಗಿದೆ. ಇಂಥ ಪರಿಸ್ಥಿತಿ ಉಳ್ಳಾಲದಲ್ಲಿ ಬರಬಾರದು. ಇಲ್ಲಿ ಯಾರಾದರೂ ಮೃತಪಟ್ಟರೆ ಗೌರವಯುತವಾಗಿ ಸಂಸ್ಕಾರ ಮಾಡಲು ಎಲ್ಲರೂ ಮುಂದಾಗಬೇಕು ಎಂದರು.
ಕೊರೊನಾ ಪಾಸಿಟಿವ್ ಬಂದವರ ಮನೆಗೆ ಐದಾರು ವಾಹನಗಳಲ್ಲಿ ಭಯೋತ್ಪಾದಕರಂತೆ ಬರುತ್ತಾರೆ. ಇದರ ವಿಡಿಯೋ ನೋಡಿ ಜನರಲ್ಲಿ ಭಯ ಹೆಚ್ಚಾಗುತ್ತಿದೆ. ಇಲ್ಲಿನ ಎಸ್ಐಗೆ ಸೋಂಕು ತಗುಲಿದೆ. ಕಳೆದ ಕೆಲ ದಿನಗಳ ಹಿಂದೆ 49 ವರ್ಷದ ಮಹಿಳೆ ಮೃತಪಟ್ಟಿದ್ದರು. ಆದರೆ ಮಾಧ್ಯಮಗಳಲ್ಲಿ 60 ವರ್ಷ ಎಂದು ಬರುತ್ತಿದೆ. ಇಂಥ ಪ್ರಕರಣಗಳಿಗೆ ಕಡಿವಾಣ ಹಾಕುವವರು ಯಾರು ಎಂದು ಮಾಜಿ ಕೌನ್ಸಿಲರ್ ಫಾರೂಕ್ ಉಳ್ಳಾಲ ಪ್ರಶ್ನಿಸಿದರು.
ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್ ಗುರು ಪ್ರಸಾದ್, ನಗರಸಭೆ ಆರೋಗ್ಯಾಧಿಕಾರಿ ಜಯಶಂಕರ, ಮುಖಂಡರಾದ ಭಗವನ್ ದಾಸ್, ಸದಾಶಿವ ಉಳ್ಳಾಲ್, ಪದಾಧಿಕಾರಿಗಳಾದ ಮೊಹಮ್ಮದ್ ತ್ವಾಹಾ, ಯು.ಕೆ.ಮೋನು ಇಸ್ಮಾಯಿಲ್, ಬಾವಾ ಮೊಹಮ್ಮದ್, ಯು.ಕೆ.ಇಲ್ಯಾಸ್, ನೌಷಾದ್ ಅಲಿ, ಆಝಾದ್ ಇಸ್ಮಾಯಿಲ್, ಮುಸ್ತಫಾ ಅಬ್ದುಲ್ಲಾ, ಯು.ಕೆ.ಇಬ್ರಾಹಿಂ, ಜೆ.ಅಬ್ದುಲ್ ಹಮೀದ್, ಆಸಿಫ್ ಅಬ್ದುಲ್ಲಾ, ಫಾರೂಕ್ ಉಳ್ಳಾಲ್ ಇನ್ನಿತರರು ಉಪಸ್ಥಿತರಿದ್ದರು.