ಮಂಗಳೂರು: ರೆಕ್ಕೆ ಮುರಿದ ಸ್ಥಿತಿಯಲ್ಲಿದ್ದ, ಪಶ್ಚಿಮಘಟ್ಟದಲ್ಲಿ ಕಾಣಸಿಗುವ ಅಪರೂಪದ ಅಲೆಗ್ಸಾಂಡ್ರಿನ್ ಗಿಳಿಯನ್ನು ಮಂಗಳೂರು ನಗರದಲ್ಲಿ ರಕ್ಷಿಸಲಾಗಿದೆ. ಗಿಳಿಯ ರೆಕ್ಕೆ ತುಂಡಾದ ಕಾರಣ ಹಾರಲು ಸಾಧ್ಯವಾಗುತ್ತಿರಲಿಲ್ಲ. ಈ ಗಿಳಿ ಕಾವೂರು ಪರಿಸರದಲ್ಲಿ ಇರುವ ಬಗ್ಗೆ ಪಕ್ಷಿ ಪ್ರೇಮಿ ತೌಸೀಫ್ ಅಹ್ಮದ್ ಅವರಿಗೆ ಮಾಹಿತಿ ಬಂದಿದ್ದು, ಸ್ಥಳಕ್ಕೆ ತೆರಳಿ ಅವರು ಗಿಳಿಯನ್ನು ರಕ್ಷಿಸಿದ್ದಾರೆ.
ಗಿಳಿಯನ್ನು ಯಾರೋ ಸಾಕುತ್ತಿದ್ದು, ಅದು ಹಾರಿಹೋಗಲು ಸಾಧ್ಯವಾಗದಂತೆ ಅದರ ರೆಕ್ಕೆಯನ್ನು ಕತ್ತರಿಸಿದ್ದರು ಎಂದು ಊಹಿಸಲಾಗಿದೆ. ಆದರೂ ಗಿಳಿ ಮನೆಯಿಂದ ತಪ್ಪಿಸಿಕೊಂಡು ಬರಲು ಯಶಸ್ವಿಯಾಗಿದೆ. ಇದನ್ನು ರಕ್ಷಣೆ ಮಾಡಿದ ತೌಸೀಫ್ ಅಹ್ಮದ್ ಅವರು ಈ ಗಿಳಿಯನ್ನು ಲಿಟ್ಲ್ ಪಾವ್ಸ್ ಕ್ಲಿನಿಕ್ಗೆ ಕೊಂಡೊಯ್ದು ಅಲ್ಲಿ ಡಾ. ಹರೀಶ್ ಅವರಿಂದ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ರೆಕ್ಕೆಯನ್ನು ಕತ್ತರಿಸಿರುವ ಪರಿಣಾಮ ಈ ಗಿಳಿ ಚೇತರಿಸಿಕೊಳ್ಳಲು ಇನ್ನೂ ಐದಾರು ತಿಂಗಳು ಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಇದೀಗ ಗಿಳಿಯನ್ನು ಅನಿಮಲ್ ಕೇರ್ ಟ್ರಸ್ಟ್ನಲ್ಲಿ ಶುಶ್ರೂಷೆಗಿಡಲಾಗಿದೆ.
ಇದು ಚೇತರಿಸಿಕೊಂಡ ಬಳಿಕ ಅರಣ್ಯಕ್ಕೆ ಬಿಡಲು ತೌಸೀಫ್ ಅಹ್ಮದ್ ನಿರ್ಧರಿಸಿದ್ದಾರೆ. ಅಲೆಗ್ಸಾಂಡ್ರಿನ್ ಗಿಳಿ ಪಶ್ಚಿಮ ಘಟ್ಟದಲ್ಲಿ ವಾಸವಿರುವ ಅಪರೂಪದ ಗಿಳಿಯಾಗಿದ್ದು ಇದನ್ನು ಮನೆಯಲ್ಲಿ ಸಾಕುವುದು ಅಪರಾಧವಾಗಿದೆ. ಈ ರೀತಿಯ ಅಪರಾಧವೆಸಗಿದರೆ ನ್ಯಾಯಾಲಯ 6 ತಿಂಗಳು ಸಜೆ ಮತ್ತು 5 ಸಾವಿರ ದಂಡ ವಿಧಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಹಾವೇರಿ: ಎತ್ತುಗಳ ಮೆರವಣಿಗೆ ವೇಳೆ ಚಪ್ಪಲಿ ತೂರಿ ವಿಕೃತಿ; ಯುವಕನಿಗೆ ಥಳಿತ